ರಾಜ್ಯದಲ್ಲಿ 4.2 ಕೋಟಿಗೂ ಅಧಿಕ ವಯಸ್ಕರಿಗೆ ಇನ್ನೂ ಸಿಕ್ಕಿಲ್ಲ ಲಸಿಕೆ..!

ಬೆಂಗಳೂರು,ಆ.16- ರಾಜ್ಯದಲ್ಲಿ 4.2 ಕೋಟಿಗೂ ಅಧಿಕ ವಯಸ್ಕರಿಗೆ ಇನ್ನೂ ಸಂಪೂರ್ಣ ಲಸಿಕೆ ನೀಡಲಾಗಿಲ್ಲ. ರಾಜ್ಯದಲ್ಲಿ ಕಳೆದ ಹದಿನಾಲ್ಕು ದಿನಗಳಲ್ಲಿ ಪ್ರತಿದಿನ ಸರಾಸರಿ ಮೂರು ಲಕ್ಷ ಕೊರೊನಾ ಲಸಿಕೆ ಡೋಸ್‍ಗಳನ್ನು ನೀಡುತ್ತಿರುವುದರಿಂದ ಎಲ್ಲ ಅರ್ಹರಿಗೆ ಲಸಿಕೆ ನೀಡಿ ಪೂರೈಸಲು ಕರ್ನಾಟಕಕ್ಕೆ ಸುಮಾರು 141 ದಿನಗಳು ಹಿಡಿಯಬಹುದು ಎಂದು ಅಂದಾಜು ಮಾಡಲಾಗಿದೆ.

ರಾಜ್ಯದಲ್ಲಿ ಇದುವರೆಗೂ 45 ಹಾಗೂ ಮೇಲ್ಪಟ್ಟ ವಯಸ್ಸಿನ ಕೇವಲ ಶೇ.33ರಷ್ಟು ಮಂದಿ ಕೊರೊನಾ ಲಸಿಕೆಯ 2ನೇ ಡೋಸ್ ಪಡೆದುಕೊಂಡಿದ್ದು, 18 ರಿಂದ 44 ವಯಸ್ಸಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆ ತಡವಾಗಿ ಆರಂಭವಾದ್ದರಿಂದ ಇಲ್ಲಿಯವರೆಗೆ ಕೇವಲ ಶೇ.3ರಷ್ಟು ಜನರು ಮಾತ್ರ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿದೆ.

ಪ್ರಸ್ತುತ ಲಸಿಕೆಗಳ ಸೀಮಿತ ಪೂರೈಕೆಯಿಂದಾಗಿ ಲಸಿಕಾ ಕಾರ್ಯಕ್ರಮ ವೇಳಾಪಟ್ಟಿಯಂತೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡಿರುವ ಬೆಂಗಳೂರು ನಗರ ಪ್ರದೇಶದಲ್ಲಿ ಕೂಡ ಕೆಲವು ವಿಧಾನಸಭಾ ಕ್ಷೇತ್ರಗಳು ಮೊದಲ ಡೋಸ್ ಲಸಿಕೆ ನೀಡುವಲ್ಲಿ ಕೂಡ ಹಿಂದೆ ಬಿದ್ದಿವೆ ಎನ್ನಲಾಗಿದೆ.

ಆಗಸ್ಟ್ 15 ರ ಹೊತ್ತಿಗೆ, ಶೇ.23.09ರಷ್ಟು ಅಂದರೆ 3,21,720 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಲಸಿಕೆ ಕೊರತೆಯೇ ಶೇಕಡವಾಡು ಹಿಂದುಳಿಯಲು ಪ್ರಮುಖ ಕಾರಣ ಎನ್ನಲಾಗಿದೆ. ರಾಜ್ಯದಲ್ಲಿ 1 ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29.50 ಲಕ್ಷಕ್ಕೆ ಏರಬಹುದುರಾಜ್ಯದಲ್ಲಿ 1 ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29.50 ಲಕ್ಷಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರದಿಂದ ದಿನಕ್ಕೆ ಕೇವಲ 1 ಸಾವಿರದಿಂದ 2 ಸಾವಿರ ಲಸಿಕೆ ಡೋಸ್‍ಗಳು ಲಭ್ಯವಾಗುತ್ತಿವೆ. ಖಾಸಗಿ ವಲಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಗಳು ದೊರೆಯುತ್ತಿದ್ದು, ಎರಡನೇ ಡೋಸನ್ನು ನೀಡಲಾಗುತ್ತಿದೆ. ಈಗಾಗಲೇ ಶೇ.24ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ನಗರದಲ್ಲಿ ಇದುವರೆಗೂ 45 ಮೇಲ್ಪಟ್ಟ ಅರ್ಧದಷ್ಟು ಜನರಿಗೆ ಮಾತ್ರ ಸಂಪೂರ್ಣ ಎರಡು ಡೋಸ್ ಲಸಿಕೆ ನೀಡಲಾಗಿದೆ.

ಬಿಬಿಎಂಪಿ ಮಿತಿಯಲ್ಲಿ 45 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ 21,90,307 ಮಂದಿಯಲ್ಲಿ 12,89,113 ಜನಕ್ಕೆ ಇನ್ನೂ 2ನೇ ಡೋಸ್ ಲಸಿಕೆ ನೀಡಬೇಕಾಗಿದೆ. ಇದರಲ್ಲಿ 11,48,217 ಮಂದಿಗೆ ಈಗಾಗಲೇ ಎರಡನೇ ಡೋಸ್ ನೀಡಲಾಗಿದೆ. ರಾಜ್ಯದಲ್ಲಿ ಭಾನುವಾರ 1431 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.93ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡವಾರು ಪ್ರಮಾಣ 1.46ರಷ್ಟಿದೆ.

ಇದೇ ಅವಧಿಯಲ್ಲಿ 1611 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 21 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36979 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2929464ಕ್ಕೆ ಏರಿಕೆಯಾಗಿದೆ. ಒಟ್ಟು 2869962 ಸೋಂಕಿತರು ಗುಣಮುಖರಾಗಿದ್ದು. 22497 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ ಏಳು ದಿನಗಳಲ್ಲಿ ರಾಜ್ಯದಲ್ಲಿನ ಕೋವಿಡ್ ಸಾವಿನ ಪ್ರಮಾಣ ದರ (ಸಿಎಫ್‍ಆರ್ ) ಶೇ 1.73ರಷ್ಟಿದ್ದರೆ ಎಂಟು ಜಿಲ್ಲೆಗಳಲ್ಲಿ ಶೂನ್ಯ ದಾಖಲೆ ವರದಿಯಾಗಿದೆ. ಮೂರು ಜಿಲ್ಲೆಗಳಲ್ಲಿ ಶೇ. 10ಕ್ಕಿಂತಲೂ ಹೆಚ್ಚಾಗಿದೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಗದಗ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಸಿಎಫ್‍ಆರ್ ಶೂನ್ಯವಾಗಿದ್ದರೆ, ಕೊಡಗಿನಲ್ಲಿ ಶೇ 0.59 ರಷ್ಟಿದೆ. ಬೆಂಗಳೂರು ನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಶೇ 2ಕ್ಕಿಂತಲೂ ಕಡಿಮೆಯಾಗಿದೆ. ಕೋಲಾರದಲ್ಲಿ ಶೇ, 11, ಧಾರವಾಡದಲ್ಲಿ ಶೇ 11.59 ಮತ್ತು ಹಾವೇರಿಯಲ್ಲಿ ಶೇ 12.50 ರಷ್ಟು ಸಾವಿನ ಪ್ರಮಾಣವಿದೆ.

ರಾಜ್ಯದ ಲಸಿಕಾ ಕಾರ್ಯಕ್ರಮದ ವಿವರ:
ರಾಜ್ಯದಲ್ಲಿ ಈವರೆಗೂ 7,62,363 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 5,63,350 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,34,274 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 4,06,040 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,26,96,702 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 58,71,95 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 2,67,51,246 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 78,69,486 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.