ಬೆಂಗಳೂರು,ಜ.20- ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿಗಮ-ಮಂಡಳಿಗೆ ಪಕ್ಷದವರನ್ನೇ ನೇಮಕ ಮಾಡಲು ಬಿಜೆಪಿ ತೀರ್ಮಾನಿಸಿದೆ.ಕಳೆದ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟಿಲ್ ಸೇರಿದಂತೆ ಕೆಲವು ಪ್ರಮುಖ ನಾಯಕರ ಜತೆ ಸಭೆ ನಡೆಸಿದ್ದು, ನಿಗಮ-ಮಂಡಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಬಿಬಿಎಂಪಿ ಸೇರಿದಂತೆ ಸ್ಥಳೀಯ ಮಟ್ಟದ ಚುನಾವಣೆಗೆ ಪಕ್ಷನಿಷ್ಠರಿಗೆ ಮೊದಲ ಆದ್ಯತೆ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಹಾಲಿ ಇರುವ ನಿಗಮ-ಮಂಡಳಿ ಅಧ್ಯಕ್ಷರನ್ನು ಬದಲಾಯಿಸಿ ಚುನಾವಣೆಗಳಲ್ಲಿ ವಂಚಿತರಾಗಿರುವವರು ಹಾಗೂ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಿಸಲು ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಈ ಹಿಂದೆ ನಿಗಮ-ಮಂಡಳಿಗೆ ಬಿ.ಎಸ್.ಯಡಿಯೂರಪ್ಪ ಅಕಾರಾವಯಲ್ಲಿ ಪಕ್ಷನಿಷ್ಠರಿಗೆ ಬದಲಾಗಿ ಅವರ ಆಪ್ತರಿಗೆ ಮಣೆ ಹಾಕಿದ್ದು ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಅನೇಕ ಸಂದರ್ಭಗಳಲ್ಲಿ ಇದು ಆರೋಪ-ಪ್ರತ್ಯಾರೋಪಕ್ಕೆ ಗುರಿಯಾಗಿತ್ತು. ಸಾಮಾನ್ಯವಾಗಿ ಪಕ್ಷಕ್ಕೆ ದುಡಿದವರನ್ನು ಇಂತಹ ಹುದ್ದೆಗಳಿಗೆ ನೇಮಕ ಮಾಡುವುದು ವಾಡಿಕೆಯಾಗಿದೆ.
ಆದರೆ, ಯಡಿಯೂರಪ್ಪನವರು ಬಿಜೆಪಿ ನಿಷ್ಠರನ್ನು ಕಡೆಗಣಿಸಿ ತಮ್ಮ ಆಪ್ತರಿಗೆ ನಿಗಮ-ಮಂಡಳಿ ಸೇರಿದಂತೆ ಆಯಾಕಟ್ಟಿನಲ್ಲಿ ಮಣೆ ಹಾಕಿದ್ದರಿಂದ ಸಂಘರ್ಷ ಉಂಟಾಗಿತ್ತು. ಈಗ ಆ ಬಣ ಈ ಬಣ ಎನ್ನದೆ ಪಕ್ಷನಿಷ್ಠರಿಗೆ ಉಳಿದ ಅವಯಲ್ಲಿ ನಿಗಮ-ಮಂಡಳಿಗೆ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಮಾರ್ಚ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದ್ದು, ಇಲ್ಲಿಯೂ ಕೂಡ ಪಕ್ಷದ ಕಾರ್ಯಕರ್ತರನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಬೆಂಗಳೂರಿನ ಪ್ರಮುಖ ನಾಯಕರ ಹಿಂಬಾಲಕರು, ಸಂಬಂಕರು, ಕುಟುಂಬದವರಿಗೆ ಟಿಕೆಟ್ ನೀಡುವ ಪರಿಪಾಠವಿದೆ. ಸಿಂಡಿಕೆಟ್ ಸೃಷ್ಟಿಸಿಕೊಂಡು ರಾಜಕೀಯವಾಗಿ ಬೆಳೆಯಲು ಕೆಲವರು ಈ ತಂತ್ರ ಅನುಸರಿಸುತ್ತಾರೆ.
ಈ ಬಾರಿ ಚುನಾವಣೆಯಲ್ಲಿ ಈ ಸಿಂಡಿಕೆಟ್ ಸಂಸ್ಕøತಿಯನ್ನು ಕೊನೆಗಾಣಿಸಿ ಪಕ್ಷದಲ್ಲಿ ಸಕ್ರಿಯವಾಗಿ ದುಡಿದವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಬಿಜೆಪಿ ಕಾರ್ಯಕರ್ತರ ಪಕ್ಷ ಎಂಬುದನ್ನು ಬೇರೆಯವರಿಗೂ ರವಾನಿಸಬೇಕು ಎಂಬ ಸಲಹೆ ಕೇಳಿಬಂದಿದೆ.
ಕೇವಲ ಹಿಂಬಾಲಕರಿಗೆ ಮಣೆ ಹಾಕಿದರೆ ಪಕ್ಷ ಸಂಘಟನೆ ಬೆಳೆಯಲು ಸಾಧ್ಯವಾಗುವುದಿಲ್ಲ. ಸೋಲು-ಗೆಲುವು ಇದ್ದೇ ಇರುತ್ತದೆ. ನಾವು ಕಾರ್ಯಕರ್ತರನ್ನು ಕಡೆಗಣಿಸಬಾರದು. ಹಿಂದೆ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಕೊಕ್ ನೀಡಿ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಕೊಡಲಾಗಿತ್ತು. ಇದರಿಂದ ಪಾಲಿಕೆಯಲ್ಲಿ ಮತ್ತೆ ನಾವು ಅಕಾರ ಹಿಡಿಯಲು ಸಾಧ್ಯವಾಯಿತು. ಇದೇ ಮಾದರಿಯನ್ನು ಬಿಬಿಎಂಪಿಯಲ್ಲಿ ಅನುಸರಿಸಬೇಕೆಂಬ ಸಲಹೆಯೂ ಕೇಳಿಬಂದಿದೆ.
ಮಾರ್ಚ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಚರ್ಚೆ ನಡೆಸಲಾಗಿದ್ದು, ವಾರ್ಡ್ಗಳ ಮೀಸಲಾತಿ ಪಟ್ಟಿ ಸಿದ್ಧಗೊಂಡ ನಂತರ ಎಲ್ಲ ಪ್ರಮುಖರೊಂದಿಗೆ ಚರ್ಚಿಸಿ ಚುನಾವಣೆಗೆ ರಣತಂತ್ರ ರೂಪಿಸಬೇಕೆಂದು ಸಿಎಂ ಮತ್ತು ಕಟೀಲ್ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ರೀತಿ ತಾಲ್ಲೂಕು ಹಾಗೂ ಜಿಪಂ ಚುನಾವಣೆಯನ್ನು ಏಪ್ರಿಲ್ ತಿಂಗಳ ನಂತರ ನಡೆಸಬೇಕು. ಆಲ್ಲಿಯೂ ಕೂಡ ಹೊಸ ಮುಖಗಳು ಅಂದರೆ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತರನ್ನು ಹುರಿದುಂಬಿಸಿ ಹೆಚ್ಚಿನ ಸ್ಥಾನ ಗೆಲ್ಲಲು ಚರ್ಚೆ ಮಾಡಲಾಗಿದೆ. ಉಳಿದಂತೆ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಕೆಲವು ಆದ್ಯತಾ ವಿಷಯಗಳ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
