ಬೆಂಗಳೂರು,ಜು.12- ಮುಂಬರುವ ಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡಿರುವ ಆಡಳಿತಾರೂಢ ಬಿಜೆಪಿ ಹೊಸ ನಿಗಮಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಲು ಮುಂದಾಗಿದೆ. ಅಧಿಕಾರದ ರುಚಿ ಅನುಭವಿಸಿರುವ 47 ನಿಗಮ ಮಂಡಳಿ ಅಧ್ಯಕ್ಷರಿಗೆ ಕೋಕ್ ನೀಡಿ ಕೆಲವರನ್ನು ಮಾತ್ರ ಮುಂದುವರೆಸುವ ಸಾಧ್ಯತೆ ಇದೆ.
ಒಂದಿಲ್ಲೊಂದು ಕಾರಣಗಳಿಂದ ಮುಂದೂಡುತ್ತಲೇ ಬಂದಿದ್ದ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಒತ್ತಡ ಹೆಚ್ಚಾಗಿದ್ದರಿಂದ ಕಳೆದ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲವು ಹಿರಿಯ ಸಚಿವರು ಹಾಗೂ ಪಕ್ಷದ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ನೇಮಕಗೊಂಡಿದ್ದ ಕೆಲವು ನಿಗಮ ಮಂಡಳಿ ಅಧ್ಯಕ್ಷರು/ಉಪಾಧ್ಯಕ್ಷರಿಗೆ ಕೋಕ್ ನೀಡಿ ಶಾಸಕರು ಹಾಗೂ ಮಾಜಿ ಶಾಸಕರಿಗೆ ನೀಡಿದ್ದ ಸ್ಥಾನವನ್ನು ಉಳಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ.
ಬಿಬಿಎಂಪಿ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಳಂಬ ಮಾಡದಂತೆ ಪಕ್ಷ ನಿಷ್ಠರು, ಸಂಘ ಪರಿವಾರ, ಜಾತಿ, ಪ್ರದೇಶವಾರು, ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನೇಮಕ ಮಾಡಬೇಕೆಂಬ ಸೂಚನೆಯನ್ನು ಪಕ್ಷದ ವರಿಷ್ಠರು ಸಿಎಂಗೆ ನೀಡಿದ್ದಾರೆ.
ಯಾವುದೇ ಕ್ಷಣದಲ್ಲೂ ನೇಮಕಾತಿ ಆದೇಶ ಹೊರಬೀಳಲಿದ್ದು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಬಾರದೆಂಬ ಕಾರಣಕ್ಕಾಗಿ ತಡವಾಗಿದೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದ ಅವರ ಹಿಂಬಾಲಕರಿಗೆ ಕೋಕ್ ನೀಡಿ ಬಿಜೆಪಿಗೆ ನಿಷ್ಠರಾಗಿರುವವರನ್ನೇ ನೇಮಿಸಬೇಕೆಂದು ಬಹುತೇಕರು ಒತ್ತಡ ಹಾಕಿದ್ದಾರೆ.
ಪ್ರಮುಖ ನಿಗಮ ಮಂಡಳಿಗಳಿಗೆ ಶಾಸಕರನ್ನೇ ನೇಮಿಸಬೇಕು. ಸಂಪುಟದಲ್ಲಿ ಸ್ಥಾನಮಾನ ಸಿಗದೆ ಮುನಿಸಿಕೊಳ್ಳುವವರಿಗೆ ಇಲ್ಲಿ ಹುದ್ದೆ ನೀಡುವುದು ಹಾಗೂ ಪಕ್ಷ ನಿಷ್ಠರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯ ಸಮನ್ವಯತೆ ಧಕ್ಕೆಯಾಗದಂತೆ ಸಮತೋಲನ ಕಾಪಾಡುವ ಉದ್ದೇಶವು ಇದರಲ್ಲಿ ಅಡಗಿದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜೊತೆಗೆ ಪದೇ ಪದೇ ಸಚಿವ ಸಂಪುಟ ವಿಸ್ತರಣೆಯಾಗದೆ ಮುಂದೂಡುತ್ತಿರುವುದು ಆಕಾಂಕ್ಷಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಇದೆಲ್ಲವನ್ನು ಅವಲೋಕಿಸಿಯೇ ನೇಮಕಾತಿಗೆ ಚಾಲನೆ ನೀಡಲಿದ್ದಾರೆ.