Sunday, July 20, 2025
Homeರಾಜ್ಯವಸತಿ ಯೋಜನೆಯಲ್ಲಿ ಭ್ರಷ್ಟಾಚಾರ, ಗ್ಯಾರಂಟಿ ಸರ್ಕಾರಕ್ಕೆ ಸಂಕಟ

ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ, ಗ್ಯಾರಂಟಿ ಸರ್ಕಾರಕ್ಕೆ ಸಂಕಟ

Corruption in housing scheme, guarantee government in trouble

ಬೆಂಗಳೂರು,ಜೂ.20- ಕೈ ಶಾಸಕ ಬಿ.ಆರ್‌. ಪಾಟೀಲ್‌ ಅವರ ಆಡಿಯೋ ಸಾಮಾಜಿಕ ಜಾಲತಾಣ ದಲ್ಲಿ ಭಾರೀ ವೈರಲ್‌ ಆಗಿದ್ದು, ಕಾಂಗ್ರೆಸ್‌‍ ಸರ್ಕಾರಕ್ಕೆ ಮತ್ತೊಮೆ ಮುಜುಗರದ ಸನ್ನಿವೇಶ ಸೃಷ್ಟಿಸಿದೆ.ವಸತಿ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಲಂಚ ಪಡೆಯಲಾಗಿದೆ ಎಂಬರ್ಥದಲ್ಲಿ ಬಿ.ಆರ್‌.ಪಾಟೀಲ್‌ ಮಾಡಿರುವ ಆರೋಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾತರೂ ಆಗಿರುವ ರಾಜ್ಯನೀತಿ ಆಯೋಗದ ಉಪಾಧ್ಯಕ್ಷ ಮತ್ತು ಅಳಂದ ಕ್ಷೇತ್ರದ ಶಾಸಕ ಬಿ.ಆರ್‌.ಪಾಟೀಲ್‌ ವಸತಿ ಸಚಿವ ಜಮೀರ್‌ ಅಹಮದ್‌ಖಾನ್‌ ಅವರ ಆಪ್ತ ಸಹಾಯಕ ಸರ್ಫರಾಜ್‌ ಖಾನ್‌ ಅವರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಗೃಹಮಂಡಳಿಯಿಂದ ಮನೆ ಹಂಚಿಕೆ ಮಾಡುವಾಗ ಶಾಸಕರು ನೀಡಿರುವ ಪತ್ರಗಳಿಗೆ ಮನ್ನಣೆ ನೀಡದೇ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೀಡಿದ ಪತ್ರಗಳನ್ನು ಆಧರಿಸಿ ಆಶ್ರಯ ಹಾಗೂ ಗೃಹಮಂಡಳಿಯ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿ.ಆರ್‌.ಪಾಟೀಲರ ಆಕ್ರೋಶವಾಗಿದ್ದು, ಯಾವ ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ತಾವು ನೀಡಿರುವ ಪತ್ರಗಳನ್ನು ಕಡೆಗಣಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಇತರ ನಾಯಕರು ನೀಡಿರುವ ಶಿಫಾರಸ್ಸು ಆಧರಿಸಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದು ಬಿ.ಆರ್‌.ಪಾಟೀಲ್‌ ಆಕ್ರೋಶವಾಗಿದೆ.

ಪಂಚಾಯಿತಿ ಶಿಫಾರಸ್ಸುಗಳನ್ನು ಆಧರಿಸಿಯೇ ಮನೆ ಹಂಚಿಕೆ ಮಾಡಬೇಕು ಎಂಬುದು ನಿಯಮಾವಳಿ ಇದೆ. ಗ್ರಾಮ ಸಭೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಗ್ರಾ.ಪಂ. ಶಿಫಾರಸ್ಸು ಆಧರಿಸಿ ಶಾಸಕರ ಅಧ್ಯಕ್ಷತೆಯಲ್ಲಿರುವ ತಾಲ್ಲೂಕು ಮಟ್ಟದ ಸಭೆಗಳು ಫಲಾನುಭವಿಗಳ ಪಟ್ಟಿಯನ್ನು ಅಖೈರುಗೊಳಿಸಬೇಕು ಎಂಬುದು ನಿಯಮ.

ಅದೇ ರೀತಿ ಅಳಂದ ಕ್ಷೇತ್ರದಲ್ಲಿ ಗ್ರಾ.ಪಂ.ಗಳ ಶಿಫಾರಸ್ಸನ್ನು ಶಾಸಕರು ತಮ ಅಧ್ಯಕ್ಷತೆಯಲ್ಲಿನ ಸಮಿತಿಯ ಸಭೆಯಲ್ಲಿಯೇ ಬದಲಾವಣೆ ಮಾಡಬಹುದಿತ್ತು. ಆದರೆ ಸ್ಥಳೀಯವಾಗಿ ವಿರೋಧ ಕಟ್ಟಿಕೊಳ್ಳಬಾರದು ಎಂಬ ಕಾರಣಕ್ಕೆ ಸಭೆಯಲ್ಲಿ ಮೌನವಾಗಿದ್ದು, ಅನಂತರ ಸಚಿವರ ಮೇಲೆ ಒತ್ತಡ ಹಾಕಿ ಪಟ್ಟಿ ಬದಲಾವಣೆ ಮಾಡಿ ನಿಷ್ಠೂರವನ್ನು ಸರ್ಕಾರದ ತಲೆಗೆ ಕಟ್ಟುವ ಪ್ರಯತ್ನ ನಡೆಸಿದ್ದರು ಎಂಬ ಆರೋಪಗಳೂ ಕೇಳಿಬಂದಿವೆ.

ಪಂಚಾಯಿತಿಯ ಶಿಫಾರಸ್ಸನ್ನು ಆಧರಿಸಿ ಫಲಾನುಭವಿಗಳ ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದೆ. ಈಗ ಶಾಸಕರು ಉದ್ದೇಶಪೂರ್ವಕವಾಗಿ ತಗಾದೆ ತೆಗೆಯುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ತಮ ಹೊಣೆಗಾರಿಕೆಯನ್ನು ನಿಭಾಯಿಸಲಾಗದೆ ಸಚಿವರ ಮೇಲೆ ಅನುಮಾನ ಬರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಾನರು ಹಾಗೂ ಆಪ್ತರು ಎಂಬ ಕಾರಣಕ್ಕಾಗಿ ಪಕ್ಷ ಮತ್ತು ಸರ್ಕಾರದ ವಿರುದ್ಧ ಪದೇಪದೇ ಮುಜುಗರದ ಹೇಳಿಕೆಗಳನ್ನು ನೀಡಿ ಬಿ.ಆರ್‌.ಪಾಟೀಲ್‌ ಗೊಂದಲ ಮೂಡಿಸುತ್ತಿದ್ದಾರೆ.

ಅವರ ವಿರುದ್ಧ ಹೈಕಮಾಂಡ್‌ವರೆಗೂ ದೂರು ಹೋಗಿದ್ದರೂ ಸಿದ್ದರಾಮಯ್ಯ ಯಾವುದೇ ಕ್ರಮ ಕೈಗೊಳ್ಳದಂತೆ ಅಡ್ಡಿಪಡಿಸುತ್ತಾರೆ ಎಂಬ ಮಾತುಗಳಿವೆ. ಈಗ ಸಿದ್ದರಾಮಯ್ಯ ಅವರ ತಮ ಆಪ್ತ ಸಚಿವರ ಬಣದಲ್ಲಿ ಗುರುತಿಸಿಕೊಂಡಿರುವ ಜಮೀನ್‌ ಅಹಮದ್‌ ಖಾನ್‌ರವರ ವಿರುದ್ಧವೂ ಆರೋಪ ಮಾಡುತ್ತಾ ಬಿ.ಆರ್‌.ಪಾಟೀಲ್‌ ಮತ್ತೊಂದು ತಗಾದೆಗೆ ಮುನ್ನುಡಿ ಬರೆದಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೇ.60 ರಷ್ಟು ಕಮಿಷನ್‌ ಪಡೆಯುತ್ತಿದೆ ಎಂಬೆಲ್ಲಾ ಆರೋಪಗಳನ್ನು ವಿರೋಧಪಕ್ಷಗಳು ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರೇ ಹಣ ಪಡೆದು ಮನೆ ಹಂಚಿಕೆ ಮಾಡಿದ್ದೀರ ಎಂಬ ದೂಷಣೆ ಮಾಡುವುದಾದರೆ ಭ್ರಷ್ಟಾಚಾರದ ಆರೋಪಕ್ಕೆ ಇನ್ನಷ್ಟು ಇಂಬು ಸಿಕ್ಕಂತಾಗುತ್ತದೆ ಎಂಬ ಆಕ್ಷೇಪಗಳಿವೆ.ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದೆ. ಈಗ ಅದೇ ಸರ್ಕಾರದ ವಿರುದ್ಧ ಪದೇಪದೇ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ.

ಬಿ.ಆರ್‌.ಪಾಟೀಲರ ಹೇಳಿಕೆಯ ಬಗ್ಗೆ ಉತ್ತರಿಸಲಾಗದೆ ಹಲವಾರು ಸಚಿವರು ತಡಬಡಾಯಿಸಿದ್ದಾರೆ. ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬೇಕು ಎಂಬ ಕಾರಣಕ್ಕೆ ಪಾಟೀಲರು ಈ ಮೊದಲು ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡಿದರು. ಸಿದ್ದರಾಮಯ್ಯನವರು ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದಾರೆ. ಅಲ್ಲಿಯೂ ಸುಮನಿರದೆ ಪದೇಪದೇ ಪಾಟೀಲರು ತಗಾದೆ ತೆಗೆಯುತ್ತಿದ್ದಾರೆ ಎಂಬ ಟೀಕೆಗಳಿವೆ.

RELATED ARTICLES

Latest News