ಕೋಟ್ಪಾ(COTPA) ಕಾಯ್ದೆ ಅಂಗೀಕರಿಸುವಂತೆ ಪ್ರಧಾನಿಗೆ ಯುವಕರ ಪತ್ರ

Social Share

ಬೆಂಗಳೂರು, ಜುಲೈ 28, 2022: ತಂಬಾಕಿನಿಂದ ಯುವಕರನ್ನು ರಕ್ಷಿಸಲು ಕೋಟ್ಪಾ (ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ) ತಿದ್ದುಪಡಿ ಮಸೂದೆ 2020 ಅನ್ನು ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸುವಂತೆ ಒತ್ತಾಯಿಸಿ, ಬೆಂಗಳೂರಿನ 1,000 ಕ್ಕೂ ಹೆಚ್ಚು ಯುವಜನರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಯುವಜನರೊಂದಿಗೆ ತಂಬಾಕು ಮುಕ್ತ ಕರ್ನಾಟಕ ವೇದಿಕೆ, ತಂಬಾಕು ವಿರೋಧಿ ವೇದಿಕೆ, ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಮತ್ತಿತರರು ಸಹ ಕೇಂದ್ರ ಆರೋಗ್ಯ ಮಂತ್ರಾಲಯ ಸಿದ್ಧಪಡಿಸಿರುವ ಕೋಟ್ಪಾ ಮಸೂದೆಯನ್ನು ಅಂಗೀಕರಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

ತಂಬಾಕು ಬಳಕೆಯನ್ನು ತಡೆಗಟ್ಟಲು ಮತ್ತು ವ್ಯಸನದಿಂದ ಯುವಕರನ್ನು ರಕ್ಷಿಸಲು ಕೋಟ್ಪಾಅನ್ನು ಬಲಪಡಿಸಿ, ಹೆಚ್ಚು ಸಮಗ್ರಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಬೇಕಿದೆ ಎಂದು ತಮ್ಮ ಪತ್ರಗಳಲ್ಲಿ ಯುವಜನರು ಒತ್ತಾಯಿಸಿದ್ದಾರೆ. ತಂಬಾಕು ಸೇವನೆಯ ಕಾನೂನುಬದ್ಧ ವಯಸ್ಸನ್ನು ಈಗಿರುವ 18 ರಿಂದ 21 ವರ್ಷಕ್ಕೆ ಹೆಚ್ಚಿಸಬೇಕು, ವಿಮಾನ ನಿಲ್ದಾಣ, ಹೋಟೆಲ್ ಮತ್ತು ಬಾರ್‌ಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ನಿಷೇದಿಸಬೇಕು, ತಂಬಾಕಿನ ನೇರ ಮತ್ತು ಪರೋಕ್ಷ ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಭಾರೀ ದಂಡವನ್ನು ವಿಧಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳನ್ನು ಶೇ. 100 ರಷ್ಟು ಧೂಮಪಾನ ಹೊಗೆ ಮುಕ್ತಗೊಳಿಸಬೇಕು ಎಂದು ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಕೋಟ್ಪಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯನ್ನು ನಾವು ಎಲ್ಲೆಡೆ ಕಾಣಬಹುದಾಗಿದೆ. ಯುವಜನರಲ್ಲಿ ತಂಬಾಕು ಬಳಕೆಯ ಜಾಗತಿಕ ಸಮೀಕ್ಷೆಯ ಪ್ರಕಾರ ಮಕ್ಕಳು 10 ವರ್ಷಕ್ಕಿಂತ ಮುಂಚೆಯೇ ತಂಬಾಕು ಚಟಕ್ಕೆ ಒಳಗಾಗುತ್ತಿದ್ದಾರೆ. ಅಕ್ರಮ ಜಾಹೀರಾತುಗಳ ಮೂಲಕ ಮಕ್ಕಳು ಮತ್ತು ಯುವಜನರನ್ನು ತಂಬಾಕು ಸೇವನೆಯತ್ತ ಸೆಳೆಯಲಾಗುತ್ತಿದೆ. ಕೋಟ್ಪಾ ಕಾಯ್ದೆಯ ತಿದ್ದುಪಡಿ ಮೂಲಕ ಎಲ್ಲ ರೀತಿಯ ನೇರ ಮತ್ತು ಪರೋಕ್ಷ ತಂಬಾಕು ಜಾಹೀರಾತನ್ನು ನಿಷೇಧಿಸಬೇಕು, ಎಂದು ರಾಜ್ಯದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಸಂಚಾಲಕ, ಶ್ರೀ ಎಸ್ ಜೆ ಚಂದರ್, ಹೇಳಿದರು.

ತಂಬಾಕಿನ ನೇರ ಜಾಹೀರಾತು ಮತ್ತು ಪರೋಕ್ಷ ಪ್ರಚಾರ ತಂತ್ರಗಳಿಗೆ ಯುವಕರು ಮಾರುಹೋಗುತ್ತಿದ್ದಾರೆ. ಒಮ್ಮೆ ತಂಬಾಕಿನ ಚಟಕ್ಕೆ ಬಿದ್ದರೆ ಅದರ ವಿ?ವರ್ತುಲದಿಂದ ಹೊರಬರುವುದು ಕಷ್ಟಕರವಾಗಿರುವುದರಿಂದ ತಂಬಾಕು ಸಂಸ್ಥೆಗಳು ಯುವಜನರನ್ನೇ ತಮ್ಮ ಪ್ರಮುಖ ಗುರಿಯಾಗಿರಿಸಿಕೊಂಡಿವೆ. ಹದಿಹರೆಯದಲ್ಲಿ ಬಹುತೇಕರು ತಂಬಾಕಿನ ದುಷ್ಟರಿಣಾಮಗಳನ್ನು ಅರಿಯುವುದಿಲ್ಲವಾದ್ದರಿಂದ, ತಂಬಾಕು ಬಳಕೆಗೆ ಕಾನೂನುಬದ್ಧ ವಯಸ್ಸನ್ನು 21 ವರ್ಷಕ್ಕೆ ಏರಿಸುವಂತೆ ನಾವು ಪ್ರಧಾನಿಗೆ ವಿನಂತಿಸುತ್ತೇವೆ ಎಂದು ಪ್ರಧಾನಿಗೆ ಪತ್ರ ಬರೆದ ಯುವಕರಲ್ಲಿ ಒಬ್ಬರಾದ ಯುವ ತಂಬಾಕು ನಿರ್ಮೂಲನಾ ಸಮರ್ಥಕ ಇಶಾನ್ ಎಸ್ ತಿಳಿಸಿದರು.

ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದ್ದು (268 ಮಿಲಿಯನ್), ಪ್ರತಿವರ್ಷ 13 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತ್ತಿದ್ದಾರೆ. ಧೂಮಪಾನದಿಂದ 10 ಲಕ್ಷ ಮಂದಿ ಮೃತಪಡುತ್ತಿದ್ದು, ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ನಿಂದ 2 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಹೊಗೆರಹಿತ ತಂಬಾಕು ಸೇವನೆಯಿಂದ 35,000ಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದಾರೆ. ಭಾರತದಲ್ಲಿನ ಎಲ್ಲ ವಿಧದ ಕ್ಯಾನ್ಸರ್ ಗಳ ಪೈಕಿ ಶೇ. 27%ರಷ್ಟ ಕ್ಯಾನ್ಸರ್ ಗಳಿಗೆ ತಂಬಾಕು ಬಳಕೆ ಕಾರಣವಾಗಿದೆ.

“ದೀರ್ಘಕಾಲ ತಂಬಾಕು ಬಳಸುವವರ ಪೈಕಿ ಬಹುತೇಕರು ಹದಿಹರೆಯದವರಾಗಿದ್ದಾಗ ತಂಬಾಕು ಬಳಕೆಯನ್ನು ಪ್ರಾರಂಭಿಸುತ್ತಾರೆ. ಪ್ರತಿಯೊಬ್ಬರಿಗೂ ಆರೋಗ್ಯದ ಹಕ್ಕು ಮತ್ತು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳ ಹಕ್ಕು ಇದೆ. ಭಾರತೀಯ ಸಂವಿಧಾನದ 21ನೇ ವಿಧಿ ಇದನ್ನು ಖಾತರಿಪಡಿಸುತ್ತದೆ. ಹೀಗಾಗಿ, ಧೂಮಪಾನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಾಗ ಅವರ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದಲ್ಲದೆ, ಆ ಸಾರ್ವಜನಿಕ ಸ್ಥಳದಲ್ಲಿ ಇರುವವರೆಲ್ಲರ ಜೀವ ಮತ್ತು ಆರೋಗ್ಯಕ್ಕೆ ಕುತ್ತು ತರುತ್ತಿದ್ದಾರೆ. ಇದು ಧೂಮಪಾನಿಗಳಲ್ಲದವರ ಆರೋಗ್ಯಕರ ಜೀವನಶೈಲಿಯನ್ನು ಹೊಂದುವ ಹಕ್ಕನ್ನು ಉಲ್ಲಂಘಿಸುತ್ತದೆ. ನಮ್ಮ ಸಾರ್ವಜನಿಕ ಸ್ಥಳಗಳನ್ನು ಶೇ. 100ರಷ್ಟ ಧೂಮಪಾನ ಮುಕ್ತ ಮಾಡಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ, ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯರಾದ ಡಾ. ವಿಶಾಲ್ ರಾವ್ ಹೇಳಿದರು.

Articles You Might Like

Share This Article