ಸಭಾಪತಿ ಚುನಾವಣೆ ಮುಂದೂಡಿಕೆ : ಹೊರಟ್ಟಿಗೆ ನಿರಾಸೆ

Social Share

ಬೆಂಗಳೂರು,ಸೆ.19- ಸಭಾಪತಿ, ಉಪಸಭಾಪತಿ ಚುನಾವಣೆ ನಡೆಸಲು ಮುಂದಾಗಿರುವ ಬಿಜೆಪಿಗೆ ಹೊಸ ಸಂಕಷ್ಟ ಎದುರಾಗಿದೆ.
ಸಭಾಪತಿ ಸ್ಥಾನದ ಭರವಸೆ ನೀಡಿ ಬಿಜೆಪಿಗೆ ಕರೆತಂದಿರುವ ಬಸವರಾಜ ಹೊರಟ್ಟಿ ಅವರಿಗೆ ಅವಕಾಶ ನೀಡುವುದಕ್ಕೆ ಬಿಜೆಪಿಯ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸಂಘ ಪರಿವಾರದ ಕಚೇರಿಯ ಬಾಗಿಲು ತಟ್ಟಿದ್ದಾರೆ. ಹೀಗಾಗಿ ಚುನಾವಣೆ ಮುಂದೂಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಶಿಕ್ಷಕರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸೆಳೆದು ಟಿಕೆಟ್ ನೀಡಿದ್ದ ಬಿಜೆಪಿ ಪರಿಷತ್‍ನಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆ ತಲುಪುವಲ್ಲಿ ಸಫಲವಾಗಿದೆ. ಅಲ್ಲದೇ, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ 8ನೇ ಬಾರಿ ಹೊರಟ್ಟಿ ಆಯ್ಕೆಯೂ ಆಗಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್‍ನಿಂದ ಸಭಾಪತಿಯಾಗಿದ್ದ ಹೊರಟ್ಟಿಗೆ ಸಭಾಪತಿಯಾಗಿ ಮುಂದುವರೆಸುವ ಭರವಸೆ ನೀಡಿಯೇ ಕರೆತರಲಾಗಿದೆ.

ಕೊಟ್ಟ ಮಾತಿನಂತೆ ಈಗ ಬಿಜೆಪಿ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಬೇಕಿದೆ. ಇದಕ್ಕಾಗಿಯೇ ಸಚಿವ ಸಂಪುಟ ಸಭೆಯಲ್ಲಿ ಸಭಾಪತಿ, ಉಪ ಸಭಾಪತಿ ಚುನಾವಣೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ಪರಿಷತ್‍ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಾಗ ಬಸವರಾಜ ಹೊರಟ್ಟಿ ಸಭಾಪತಿ, ಪ್ರಾಣೇಶ ಉಪ ಸಭಾಪತಿ ಆಗಿದ್ದರು. ಈಗಲೂ ಇದೇ ಆಯ್ಕೆಯನ್ನು ಮಾಡಬೇಕು ಎಂದು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.

ಅಸಮಾಧಾನಿತರ ದೂರು: ರಾಜ್ಯ ಬಿಜೆಪಿ ನಾಯಕರ ಈ ನಿರ್ಧಾರಕ್ಕೆ ಪರಿಷತ್‍ನ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಕೇಶವಕೃಪಾಗೆ ದೂರು ಕೊಂಡೊಯ್ದಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ವಲಸಿಗರಿಗೆ ಅವಕಾಶ ಕೊಡುವ ಪರಂಪರೆ ಮಾಡಿದರೆ ಹೇಗೆ, ನಿಷ್ಠಾವಂತರಿಗೆ ಅಧಿಕಾರ ಬೇಡವೇ ಎಂದು ಅಸಮಧಾನ ಹೊರ ಹಾಕಿದ್ದಾರೆ.

ಸಭಾಪತಿ ಸ್ಥಾನದ ಅವಕಾಶ ಮತ್ತೆ ಬಿಜೆಪಿಗೆ ಸಿಕ್ಕಿದೆ. ಈಗ ಹಿರಿಯ ಸದಸ್ಯರಿಗೆ ಅವಕಾಶ ಕೊಡುವ ಬದಲು ಹೊರಟ್ಟಿ ಅವರಿಗೆ ಅವಕಾಶ ಕೊಟ್ಟರೆ ಪಕ್ಷ ನಿಷ್ಠರಿಗೆ ಯಾವ ಸಂದೇಶ ಕೊಟ್ಟಂತಾಗುತ್ತದೆ ಎಂದು ಸಂಘದ ಪ್ರಮುಖರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷ ನಿಷ್ಠ ಸದಸ್ಯರ ಅಸಮಧಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕೇಶವಕೃಪಾಗೆ ಕರೆಸಿಕೊಂಡ ಸಂಘದ ಪ್ರಮುಖರು ಹಲವು ವಿಷಯಗಳ ಜೊತೆಗೆ ಸಭಾಪತಿ ಆಯ್ಕೆ ಕುರಿತೂ ಮಾತುಕತೆ ನಡೆಸಿ ಸದಸ್ಯರ ಅಭಿಪ್ರಾಯ ಕುರಿತು ತಿಳಿಸಿದ್ದಾರೆ. ಇದಕ್ಕೆ ಸಿಎಂ ಹಾಗೂ ರಾಜ್ಯಾಧ್ಯಕ್ಷರು ವಿವರಣೆ ನೀಡಿದ್ದಾರೆ.

ಅಧಿವೇಶನಕ್ಕೆ ಆಕಾಂಕ್ಷಿತರು ಗೈರು, ಕಲಾಪದಲ್ಲಿ ನಿರಾಸಕ್ತಿ ಬಹುಮತವಿಲ್ಲದ ಕಾರಣ ಪರಿಷತ್‍ನಲ್ಲಿ ನಮ್ಮ ಪ್ರಮುಖ ಬಿಲ್‍ಗಳಿಗೆ ಸಮಸ್ಯೆಯಾಗಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಪಾಸ್ ಮಾಡಿಸಿಕೊಳ್ಳಲು ಪ್ರಯಾಸ ಪಡಬೇಕಾಯಿತು. ಇದರ ಅನಿವಾರ್ಯತೆಗೆ ಸಿಲುಕಿದ್ದರಿಂದ ಗೆದ್ದೇ ಗೆಲ್ಲುವ ಖಚಿತತೆ ಇದ್ದ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನದ ಭರವಸೆ ನೀಡಿ ಪಕ್ಷಕ್ಕೆ ಕರೆತರಲಾಗಿದೆ.

ಇದರಿಂದಾಗಿ ಇದೀಗ ನಮಗೆ ಬಹುಮತ ಬಂದಿದ್ದು, ವಿಧಾನಸಭೆಯಲ್ಲಿ ಅಂಗೀಕಾರಗೊಂಡು ವಿಧಾನ ಪರಿಷತ್ ಅಂಗೀಕಾರಕ್ಕೆ ಕಾದಿದ್ದ ಮತಾಂತರ ನಿಷೇಧ ಕಾಯ್ದೆಗೆ ಈಗ ಅಂಗೀಕಾರ ಸಿಕ್ಕಿದೆ. ಬಿಲ್‍ಗಳಿಗೆ ಸರಳವಾಗಿ ಅಂಗೀಕಾರ ಪಡೆದುಕೊಳ್ಳಬಹುದಾಗಿದೆ ಎಂದು ಹೊರಟ್ಟಿಗೆ ಅವಕಾಶ ನೀಡಲು ನಿರ್ಧರಿಸಿದ್ದ ನಿಲುವನ್ನು ಸಮರ್ಥಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಗೊಂದಲ: ಸದ್ಯ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿಯೇ ಸಭಾಪತಿ, ಉಪಸಭಾಪತಿ ಆಯ್ಕೆಗೆ ಸೆ.21ರಂದು ಚುನಾವಣೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಆದರೆ, ಇದೀಗ ಸಂಘ ಪರಿವಾರದ ಪ್ರಮುಖರು ನಿರ್ಧಾರ ಮರು ಪರಾಮರ್ಶೆ ಮಾಡುವಂತೆ ಸೂಚಿಸಿರುವುದು ಗೊಂದಲ ಸೃಷ್ಟಿಸಿದೆ.

ಹಾಗಾಗಿ ಈ ಅಧಿವೇಶನದಲ್ಲೇ ಚುನಾವಣೆ ನಡೆಸಬೇಕಾ ಅಥವಾ ಚಳಿಗಾಲದ ಅಧಿವೇಶನದಲ್ಲಿ ಚುನಾವಣೆಗೆ ಮುಂದೂಡಬೇಕಾ ಎನ್ನುವ ಗೊಂದಲಕ್ಕೆ ನಾಯಕರು ಸಿಲುಕಿದ್ದಾರೆ. ಈ ಕುರಿತು ಮತ್ತೊಮ್ಮೆ ಆಂತರಿಕ ಸಭೆ ನಡೆಸಿ ಹಿರಿಯ ನಾಯಕ ಯಡಿಯೂರಪ್ಪ ಅವರ ಸಲಹೆಯನ್ನೂ ಪಡೆದು ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಪೈಪೋಟಿ: ಹಾಲಿ ಹಂಗಾಮಿ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಘುನಾಥ್ ರಾವ್ ಮಲ್ಕಾಪುರೆ, ಹಿರಿಯ ಸದಸ್ಯ ಆಯನೂರು ಮಂಜುನಾಥ್ ಸಭಾಪತಿ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಮಾಜಿ ಉಪ ಸಭಾಪತಿ ಪ್ರಾಣೇಶ್ ಸಭಾಪತಿ ಸ್ಥಾನಕ್ಕೆ ಕಣ್ಣಿಟ್ಟಿದ್ದರೂ ಉಪ ಸಭಾಪತಿ ಸ್ಥಾನ ಅವರಿಗೆ ಲಭ್ಯವಾಗುವ ಕಾರಣಕ್ಕೆ ಅವರು ಸಮಾಧಾನಿತರಾಗಿದ್ದಾರೆ. ಆದರೆ, ಮಲ್ಕಾಪುರೆ ಮತ್ತು ಆಯನೂರು ಸಭಾಪತಿ ಸ್ಥಾನಕ್ಕೆ ಪೈಪೆÇೀಟಿ ನಡೆಸಿದ್ದಾರೆ.

Articles You Might Like

Share This Article