ದಾವಣಗೆರೆ : ಮನೆಯ ಕಾಲಿಂಗ್ ಬೆಲ್ ಒತ್ತಿ ಬಾಗಿಲು ತೆರೆಸಿದ ದುಷ್ಕರ್ಮಿಗಳು ಏಕಾಏಕಿ ಒಳಗೆ ನುಗ್ಗಿ ಮಾರಾಕಾಸ್ತ್ರಗಳಿಂದ ವೃದ್ದ ದಂಪತಿಯನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ. ತಾಲೂಕಿನ ಎಲೆಬೇತೂರು ಗ್ರಾಮದ ಗರುಸಿದ್ದಯ್ಯ(80), ಸರೋಜಮ್ಮ (75) ಕೊಲೆಯಾದ ವೃದ್ದ ದಂಪತಿ.
ಹಲವಾರು ವರ್ಷಗಳಿಂದ ತೋಟ ಮನೆ ನೋಡಿಕೊಂಡು ಈ ಗ್ರಾಮದಲ್ಲಿ ವಾಸವಾಗಿದ್ದ ದಂಪತಿ ತಮ್ಮ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು. ಮನೆಯಲ್ಲಿ ದಂಪತಿ ಇಬ್ಬರೆ ವಾಸವಾಗಿದ್ದರು. ಇದನ್ನು ತಿಳಿದಿದ್ದ ದುಷ್ಕರ್ಮಿಗಳು ಮಧ್ಯರಾತ್ರಿ ಇವರ ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಪರಿಚಯಸ್ಥರೇ ಬಂದಿರ ಬಹುದೆಂದು ಗುರುಸಿದ್ದಯ್ಯ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಅವರನ್ನು ತಳ್ಳಿಕೊಂಡು ಒಳಗೆ ನುಗ್ಗಿದ ದುಷ್ಕರ್ಮಿಗಳು ಮಚ್ಚಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗಲಾಟೆ ಶಬ್ಧ ಕೇಳಿ ನಿದ್ದೆಯಲ್ಲಿದ್ದ ಸರೋಜಮ್ಮ ಎಚ್ಚರಗೊಂಡು ರೂಮ್‍ನಿಂದ ಹೊರಗೆ ಬರುತ್ತಿದ್ದಂತೆ ಅವರ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿ, ಇಬ್ಬರನ್ನು ಕೊಲೆ ಮಾಡಿ ಹೊರಗಿನಿಂದ ಮುಂಬಾಗಿಲ ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಪಕ್ಕದ ಮನೆಯವರು, ಸರೋಜಮ್ಮ ಅವರನ್ನು ಮಾತನಾಡಿಸಲು ಇವರ ಮನೆಗೆ ಬಂದಾಗ ಹೊರಗಿನಿಂದ ಚಿಲಕ ಹಾಕಿರುವುದು ಗಮನಿಸಿ, ಚಿಲಕ ತೆಗೆದು ನೋಡಿದಾಗಲೇ ದಂಪತಿ ಕೊಲೆ ಯಾಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ಅವರ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಎಸ್‍ಪಿ ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವೃದ್ದ ದಂಪತಿ ಕೊಲೆಗೆ ನಿಖರ ಕಾರಣವೆಂಬುದು ತಿಳಿದು ಬಂದಿಲ್ಲ ತನಿಖೆಯ ನಂತರ ಕೊಲೆಯ ಸತ್ಯಾಸತ್ಯತೆ ತಿಳಿದು ಬರಲಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ದುಷ್ಕರ್ಮಿಗಳು ಬಂಧನಕ್ಕೆ ಬಲೆ ಬೀಸಿದ್ದಾರೆ. ವೃದ್ಧ ದಂಪತಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮನೆಯಲ್ಲಿ ಹಣ-ಆಭರಣ ದೋಚಿಲ್ಲ, ಯಾವುದೇ ವಸ್ತುಗಳು ಚಲ್ಲಾಪಿಲ್ಲಿಯಾಗಿಲ್ಲ. ಸರೋಜಮ್ಮ ಅವರ ಮೈಮೇಲಿನ ಆಭರಣ ಸಹ ಹಾಗೆಯೇ ಇದೆ.
ಇದೆಲ್ಲವನ್ನು ಗಮನಿಸಿರುವ ಪೊಲೀಸರು ಆಸ್ತಿಗಾಗಿ ಕೊಲೆ ಮಾಡಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದು , ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಇಬ್ಬರು ವಶಕ್ಕೆ:
ಘಟನೆ ಸಂಬಂಧ ವೃದ್ಧ ದಂಪತಿಯ ಇಬ್ಬರು ಸಂಬಂಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.
