ಮನೆಯ ಗವಾಕ್ಷಿ ಮೂಲಕ ಒಳನುಗ್ಗಿ ದಂಪತಿಯನ್ನು ಕೊಂದ ದುಷ್ಕರ್ಮಿಗಳು..!

Social Share

ಶಿಡ್ಲಘಟ್ಟ,ಫೆ.10- ಮನೆಯ ಗವಾಕ್ಷಿ ಮೂಲಕ ಒಳನುಗ್ಗಿದ ದುಷ್ಕರ್ಮಿಗಳು ವೃದ್ದ ದಂಪತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಪಟ್ಟಣದ ಕಾಮಾಟಿಗರ ಪೇಟೆಯ ವಾಸವಿ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ವಾಸವಾಗಿದ್ದ ಶ್ರೀನಿವಾಸಲು(77) ಮತ್ತು ಪತ್ನಿ ಪದ್ಮಾವತಿ(66) ಕೊಲೆಯಾದ ವೃದ್ದ ದಂಪತಿ.
ಶ್ರೀನಿವಾಸಲು ಪಟ್ಟಣದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರನ್ನು ಮದುವೆ ಮಾಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದಂಪತಿ ಮಾತ್ರ ಈ ಮನೆಯಲ್ಲಿದ್ದರು. ತಡರಾತ್ರಿ ದುಷ್ಕರ್ಮಿಗಳು ಮನೆಯ ಗವಾಕ್ಷಿ ಮೂಲಕ ಒಳನುಗ್ಗಿದ್ದಾರೆ. ರೂಮ್‍ನಲ್ಲಿ ಮಲಗಿದ್ದ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದಾಗ ಬಾಗಿಲು ತೆಗೆದಿಲ್ಲ. ಅನುಮಾನಗೊಂಡು ಅಕ್ಕಪಕ್ಕದವರನ್ನು ಕರೆದಿದ್ದಾರೆ. ನೆರೆಮನೆಯವರು ಮನೆ ಬಳಿ ಬಂದು ನೋಡಿದಾಗ ದಂಪತಿಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಅಕ್ಕಪಕ್ಕದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ರಾತ್ರಿ 10ರಿಂದ ಬೆಳಗ್ಗೆ 10 ಗಂಟೆ ಮಧ್ಯೆ ಈ ಘಟನೆ ನಡೆದಿದ್ದು, ಮೂರು ದೃಷ್ಟಿಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಎಸ್‍ಪಿ ಮಿಥನ್‍ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಡಿವೈಎಸ್‍ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ಎಸ್‍ಪಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Articles You Might Like

Share This Article