ಬೆಂಗಳೂರು,ಫೆ.16- ರಾಜ್ಯಾದ್ಯಂತ ಇಂದಿನಿಂದ ಪದವಿ, ಪದವಿಪೂರ್ವ ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕೆಂದು ಪೋಷಕರು ಹಾಗೂ ಮಕ್ಕಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರು ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಲೇಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಪುನರಾರಂಭಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು.
ನ್ಯಾಯಾಲಯದ ಆದೇಶವನ್ನು ನಾವು ಪಾಲನೆ ಮಾಡಬೇಕು. ಕೋರ್ಟ್‍ನ ಮಧ್ಯಂತರ ಆದೇಶ ಪಾಲಿಸಿ ಅಂತಿಮ ತೀರ್ಪಿನವರೆಗೂ ಸಂಯಮದಿಂದ ಕಾಯಬೇಕು. ಇದು ನನ್ನ ಕಳಕಳಿಯ ಮನವಿ ಎಂದರು. ಶಾಲೆ, ಕಾಲೇಜುಗಳ ಆಡಳಿತ ಮಂಡಳಿ, ಪೋಷಕರು ಪರಸ್ಪರ ಗೊಂದಲ ಬಗೆಹರಿಸಿಕೊಂಡು ಸೌಹಾರ್ದಯುತ ವಾತಾವರಣ ನಿರ್ಮಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಆ ಮೂಲಕ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಂತಾಪ: ಸಾಹಿತಿ ಚೆನ್ನವೀರ ಕಣವಿ ಅವರು ಮತ್ತು ಅವರ ಕುಟುಂಬ ನಮಗೆ ಬಹಳಷ್ಟು ಆತ್ಮೀಯರು. ಅವರು ಒಂದು ದಿನವೂ ಕೋಪ ಮಾಡಿಕೊಂಡವರಲ್ಲ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಬಹಳಷ್ಟು ಹಾನಿಯಾಗಿದೆ ಎಂದು ಕಂಬನಿ ಮಿಡಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ನಾವು ಒಬ್ಬೊಬ್ಬರನ್ನು ಕಳೆದುಕೊಂಡಿದ್ದೇವೆ. ಕಳೆದ ಬಾರಿ ಅಷ್ಟೇ ಸಾಹಿತಿ ಚಂಪಾ ಅವರನ್ನು ಕಳೆದುಕೊಂಡಿದ್ದೇವೆ. ಇದು ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಹೇಳೀದರು.
