ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಕುರಿತು ತನಿಖೆಗೆ ಆದೇಶ

Social Share

ಲಖ್ನೋ,ಸೆ.20- ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣ ಕುರಿತು ಸಿಬಿಐ ವರದಿಯನ್ನು ಲಖ್ನೋ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ಮರು ತನಿಖೆಗೆ ಆದೇಶ ನೀಡಿದೆ. ಅನುರಾಗ್ ತಿವಾರಿ ಅವರ ಸಹೋದರ ಮಾಯಾಂಕ್ ತಿವಾರಿಯವರು ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹೀಗಾಗಿ ತನಿಖಾ ವರದಿಯನ್ನು ತಿರಸ್ಕರಿಸಿದ್ದು, ಹೊಸದಾಗಿ ತನಿಖೆ ನಡೆಸಬೇಕೆಂದು ನ್ಯಾಯಾೀಧಿಶರು ಸಿಬಿಐಗೆ ಆದೇಶ ಮಾಡಿದ್ದಾರೆ.

2017 ಮೇ 17ರಂದು ಉತ್ತರಪ್ರದೇಶದ ಹಜರತ್‍ಗಂಜ್‍ನ ಮೀರಾಬಾಯಿ ಮಾರ್ಗ್‍ನ ಅತಿಥಿಗೃಹದಲ್ಲಿ ಅನುರಾಗ್ ತಿವಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಉತ್ತರಪ್ರದೇಶದ ಬಹ್ರೆಚ್ ಜಿಲ್ಲೆಯ ನಿವಾಸಿಯಾಗಿದ್ದ ಅವರ ಸಾವಿನ ಕುರಿತಂತೆ ಸಹೋದರಾರಾದ ಅಲೋಕ್ ತಿವಾರಿ ಹಾಗೂ ಮಾಯಾಂಕ್ ತಿವಾರಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಭಾರತದ ರಾಯಭಾರ ಕಚೇರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿ

ಕರ್ನಾಟಕ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾಗಿದ್ದ ವೇಳೆ ನಿಗೂಢವಾಗಿ ಸಾವನ್ನಪ್ಪಿದ್ದರು. ಅಂತಿಮವಾಗಿ ಉತ್ತರಪ್ರದೇಶ ಸರ್ಕಾರ ಈ ಪ್ರಕರಣ ಕುರಿತಂತೆ ವಿಶೇಷ ತನಿಖಾ ದಳ (ಎಸ್‍ಐಟಿ)ಕ್ಕೆ ಆದೇಶಿಸಿತ್ತು. ಆದರೆ ಕುಟುಂಬದ ಸದಸ್ಯರು ಸಿಬಿಐ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರಿಂದ ಅವರ ಕೋರಿಕೆಯಂತೆ ಸಿಬಿಐಗೆ ವರ್ಗಾವಣೆ ಮಾಡಿದ್ದರು.

ಅನುರಾಗ್ ತಿವಾರಿ ಅವರು ರಜೆ ಮೇಲೆ ತೆರಳಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದರಿಂದ ಒಂದಿಷ್ಟು ರೆಕ್ಕೆಪುಕ್ಕಗಳು ಹುಟ್ಟಿಕೊಂಡಿದ್ದವು. ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ತಡೆಯಲು ಅವರು ಮುಂದಾಗಿದ್ದರು. ಸರ್ಕಾರ ಇದಕ್ಕೆ ಅವಕಾಶ ಕೊಡದಿದ್ದರಿಂದ ಬೇಸತ್ತು ರಜೆ ಮೇಲೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು.

Articles You Might Like

Share This Article