ನವದೆಹಲಿ, ಜ.20- ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಲು ಔಷಧ ಗುಣಮಟ್ಟ ನಿಯಂತ್ರಣ ಮಂಡಳಿ (ಡಿಸಿಜಿಐ) ಸರ್ಕಾರಕ್ಕೆ ಶಿಪಾರಸು ಮಾಡಿದೆ.
ಕೊರೊನಾ ವಿರುದ್ಧ ಹೋರಾಡಲು ಜನತೆಗೆ ಉಚಿತವಾಗಿ ಒದಗಿಸಲಾಗುತ್ತಿರುವ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಒದಗಿಸಲು ಅವಕಾಶ ನೀಡುವಂತೆ ಡಿಜಿಸಿಐ ಕೇಂದ್ರಕ್ಕೆ ಶಿಪಾರಸು ಮಾಡಿದೆ.
ಈ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ತರಲು ಭಾರತ ಬಯೋಟಿಕ್ ಮತ್ತು ಸಿರೋಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಿದ್ದವು. ಈ ಅರ್ಜಿಗಳನ್ನು ಕಳೆದ ಶುಕ್ರವಾರ ಪರಿಶೀಲಿಸಿದ ಡಿಜಿಸಿಐ ಕೊರೊನಾ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶಿಫಾರಸು ಮಾಡಿದೆ.
ಸೆಂಟ್ರಲ್ ಡ್ರಗ್ಸ್ ಸ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಸನ್ ಅಡಿಯಲ್ಲಿ ಬರುವ ತಜ್ಞರ ಸಮಿತಿ ಕೂಡ ಕೇಂದ್ರ ಔಷಧ ನಿಯಂತ್ರಣ ಸಮಿತಿಗೆ ಕೋವಿಡ್ ಲಸಿಕೆಗಳಿಗೆ ಸಂಬಂಸಿದಂತೆ ನಿಯಮಗಳನ್ನು ಪರಿಷ್ಕರಿಸಲು ಮನವಿ ಮಾಡಿತ್ತು.
ಈ ಮೂಲಕ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಶೀಘ್ರ ಮುಕ್ತ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಕಳೆದ ವರ್ಷ ಜ.23ರಿಂದ ಈ ಲಸಿಕೆಗಳನ್ನು ತುರ್ತು ಬಳಕೆ ಮಾಡಲು ಅವಕಾಶ ನೀಡಲಾಗಿತ್ತು.
ಮುಕ್ತ ಮಾರುಕಟ್ಟೆಗೆ ಬರುವ ಮೂಲಕ ಕೊರೊನಾ ಸೋಂಕಿನ ಅಪಾಯ ಕ್ಷೀಣಿಸುವ ಸಾಧ್ಯತೆ ಇದೆ.
