SHOCKING : ಅಮಾಯಕರ ಮೇಲೆ ಕೊರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್..!

ಭೂಪಾಲ್, ಜ.6- ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಬಳಸಲಾಗುವ ಲಸಿಕೆಯ ಕ್ಲಿನಿಕಲ್ ಟ್ರಯಲ್ ಕುರಿತಂತೆ ವಿವಾದವೊಂದು ಸೃಷ್ಟಿಯಾಗಿದ್ದು, ಯಾವುದೇ ಪೂರ್ವ ಮಾಹಿತಿ ನೀಡದೆ ಅಮಾಯಕರಿಗೆ ಲಸಿಕೆ ನೀಡಿರುವ ಆರೋಪ ಎದುರಾಗಿದೆ. 1984ರಲ್ಲಿ ಘೋರ ಅನಿಲ ದುರಂತ ಸಂಭವಿಸಿದ ಭೂಪಾಲ್‍ನಿಂದ ಅರ್ಧ ಕಿ.ಮೀ. ದೂರದಲ್ಲಿರುವ ಬಡ ಜನರ ಮೇಲೆ ಯಾವುದೇ ಮಾಹಿತಿ ನೀಡದೆ ಲಸಿಕೆಯ ಪ್ರಯೋಗ ನಡೆಸಿರುವುದು ಖಾಸಗಿ ಚಾನಲ್‍ನ ವರದಿಯಿಂದ ಬಹಿರಂಗಗೊಂಡಿದೆ.

ನಿಯಮಾವಳಿಗಳ ಪ್ರಕಾರ ಕ್ಲಿನಿಕಲ್ ಟ್ರಯಲ್ ನಡೆಸಬೇಕಾದರೆ ಪ್ರಯೋಗಕ್ಕೆ ಒಳಗಾಗುವ ವ್ಯಕ್ತಿಗಳ ಆರೋಗ್ಯ ಪರೀಕ್ಷೆ ನಡೆಸಬೇಕು. ಅವರ ದೇಹ ಸ್ಥಿತಿ ಹೊಸ ಔಷಧಿಯನ್ನು ಧಾರಣ ಮಾಡುವ ಸಾಮಥ್ರ್ಯ ಹೊಂದಿದೆ ಎಂಬ ಖಚಿತವಾದ ಬಳಿಕ ಅವರಿಗೆ ಔಷಧಿಯಿಂದ ಆಗಬಹುದಾದ ಪರಿಣಾಮಗಳು ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ವಿವರಣೆ ನೀಡಬೇಕು.

ಕ್ಲಿನಿಕಲ್ ಟ್ರಯಲ್‍ಗೆ ಒಳಪಡಲು ಸಿದ್ಧವಾಗಿರುವ ಬಗ್ಗೆ ಲಿಖಿತ ಅನುಮತಿ ಪತ್ರ ಪಡೆದುಕೊಳ್ಳಬೇಕು. ಕುಟುಂಬದ ಸದಸ್ಯರಿಗೂ ಮಾಹಿತಿ ನೀಡಬೇಕು. ಆದರೆ, ಭೂಪಾಲ್‍ನಲ್ಲಿ ಬಡ ಜನರ ಮೇಲೆ ನಡೆದಿರುವ ಪ್ರಯೋಗ ಈ ರೀತಿಯ ಯಾವುದೇ ಪೂರ್ವ ಮಾಹಿತಿಯನ್ನು ನೀಡದೆ ಏಕಾಏಕಿ ಲಸಿಕೆ ನೀಡಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

ದಾಖಲೆಗಳ ಪ್ರಕಾರ ಕಳೆದ ಡಿಸೆಂಬರ್‍ನಲ್ಲಿ ಭೂಪಾಲ್‍ನ ನೂರಾರು ಮಂದಿಯ ಮೇಲೆ ಕ್ಲಿನಿಲ್ ಟ್ರಯಲ್ ನಡೆದಿದೆ. ಅವರಲ್ಲಿ 250 ಮಂದಿ ಸಹಮತಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಕೆಲವರಿಗಷ್ಟೇ ಕೊರೊನಾ ಲಸಿಕೆಯ ಪರಿಣಾಮ ಹಾಗೂ ಅಡ್ಡ ಪರಿಣಾಮದ ಬಗ್ಗೆ ಮಾಹಿತಿ ನೀಡಲಾಗಿದೆ.

ರಕ್ತ, ಮೂತ್ರ ಹಾಗೂ ಮೂಗಿನ ಲೋಳೆಯ ಮಾದರಿಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಿದ್ದು, ಅನಂತರ ಲಸಿಕೆ ನೀಡಲಾಗಿದೆ. ಅವರಲ್ಲಿ ಕೆಲವರಿಗೆ ನಾಲ್ಕು ಪುಟಗಳ ವಿವರಣಾ ಪತ್ರವನ್ನು ನೀಡಲಾಗಿದೆ. ಆದರೆ, ಬಹಳಷ್ಟು ಮಂದಿ ಅನಕ್ಷರಸ್ಥರು ಮತ್ತು ಕೂಲಿ ಕಾರ್ಮಿಕರು ನಮಗೆ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ.

ನಮಗೆ ಓದಲು, ಬರೆಯಲು ಬರುವುದಿಲ್ಲ. ಈ ಇಂಜಕ್ಷನ್ ತೆಗೆದುಕೊಂಡರೆ ನಿಮಗೆ ಕೊರೊನಾ ಬರುವುದಿಲ್ಲ ಎಂದು ಹೇಳಿ ಲಸಿಕೆ ಹಾಕಿದ್ದಾರೆ ಎಂದು ಭೂಪಾಲ್‍ನ ಪೀಪಲ್ಸ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ವಿರುದ್ಧ ಆರೋಪ ಮಾಡಿದ್ದಾರೆ.

ರೇಖಾ ಎಂಬ ಭೂಪಾಲ್‍ನ ಓರಿಯಾಬಸ್ತಿ ನಿವಾಸಿ ಖಾಸಗಿ ಚಾನಲ್‍ನೊಂದಿಗೆ ಮಾತನಾಡಿದ್ದು, ಆಸ್ಪತ್ರೆಯವರು ಈ ಇಂಜೆಕ್ಷನ್ ತೆಗೆದುಕೊಂಡರೆ ಕೊರೊನಾ ಬರುವುದಿಲ್ಲ ಎಂದು ಹೇಳಿದ್ದರು. ಅದು ಕ್ಲಿನಿಕಲ್ ಟ್ರಯಲ್ ಎಂದಾಗಲಿ ಅಥವಾ ಅದರ ಅಡ್ಡಪರಿಣಾಮದ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಇಂಜೆಕ್ಷನ್ ಕೊಟ್ಟ ಬಳಿಕ ಆಸ್ಪತ್ರೆಯಿಂದ ನನಗೆ ಯಾವುದೇ ವಿಚಾರಣಾ ಕರೆಗಳು ಬಂದಿಲ್ಲ ಎಂದು ಹೇಳಿದ್ದಾರೆ.

ಶಂಕರ್‍ನಗರದ ಸಾವಿತ್ರಿ ಎಂಬ ಮಹಿಳೆ ನಾನು ಡಿ.8ರಂದು ನನಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಅದು ಕೊರೊನಾಕ್ಕೆ ಕೊಟ್ಟ ಲಸಿಕೆ ಎಂದು ನನಗೆ ಗೊತ್ತಿಲ್ಲ ಎಂದಿದ್ದು, ಇದೇ ಏರಿಯಾದ ಹಲವಾರು ಬಡವರಿಗೆ 750 ರೂ. ಕೊಟ್ಟು ಕರೆದುಕೊಂಡು ಹೋಗಿ ಇಂಜೆಕ್ಷನ್ ಕೊಟ್ಟಿದ್ದಾರೆ. ಮನೆಗೆ ಹೋದ ಬಳಿಕ ಏನಾದರೂ ಅಡ್ಡ ಪರಿಣಾಮಗಳಾದರೆ ಕರೆ ಮಾಡಿ, ಇಲ್ಲವೇ ಆಸ್ಪತ್ರೆಗೆ ಬನ್ನಿ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾಗಿ ನಿವಾಸಿಗಳು ತಿಳಿಸಿದ್ದಾರೆ.

37 ವರ್ಷದ ಜಿತೇಂದ್ರ ನರ್ವಾರಿಯಾ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದು, ಅವರ ಮನೆಯ 5 ಮಂದಿಗೆ ಡಿ.10ರಂದು ಲಸಿಕೆ ನೀಡಲಾಗಿದೆ. ಅದೃಷ್ಟ ವಶಾತ್ ಈವರೆಗೂ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ. ನಮ್ಮ ಮನೆಯಲ್ಲಿ ನಾನೊಬ್ಬನೇ ದುಡಿಯುವ ವ್ಯಕ್ತಿ. ಮಾಹಿತಿ ನೀಡದೆ ಈ ರೀತಿ ಬಡವರ ಜತೆ ಆಟವಾಡುವುದು ಸರಿಯಲ್ಲ ಎಂದು ಆತ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎ.ಕೆ.ದೀಕ್ಷಿತ್ ಅವರು ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಐಸಿಎಂಆರ್‍ನ ನೇತೃತ್ವದಲ್ಲೇ ನಮ್ಮ ಆಸ್ಪತ್ರೆ ಕ್ಲಿನಿಕಲ್ ಟ್ರಯಲ್ ನಡೆಸಿದೆ. ಎಲ್ಲಾ ಮಾರ್ಗ ಸೂಚಿಗಳನ್ನು ಅನುಸರಿಸಿದ್ದೇವೆ. ಲಸಿಕೆ ಪಡೆಯುವ ವ್ಯಕ್ತಿಗಳ ಜತೆ ಕನಿಷ್ಠ ಅರ್ಧ ಗಂಟೆ ಕೌನ್ಸಿಲಿಂಗ್ ನಡೆಸಿ ವಿವರಣೆ ನೀಡಿದ್ದೇವೆ. ಈಗ ಕೇಳಿ ಬರುತ್ತಿರುವ ಆರೋಪಗಳು ಸತ್ಯ ಅಲ್ಲ. ಲಸಿಕೆ ಪಡೆದ ಎಲ್ಲರಿಂದಲೂ ನಾವು ಸಹಿ ಮಾಡಿಸಿಕೊಂಡಿದ್ದೇವೆ. ಈ ಬಗ್ಗೆ ಸೂಕ್ತ ದಾಖಲೆಗಳು ನಮ್ಮ ಬಳಿ ಇವೆ ಎಂದಿದ್ದಾರೆ.

ಆರೋಪ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಧ್ಯ ಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್‍ಸಾರಂಗ್ ತನಿಖೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಕೆಲವೊಮ್ಮೆ ರಾಜಕೀಯ ಕಾರಣಗಳಿಂದಲೂ ಈ ರೀತಿಯ ಆರೋಪಗಳು ಕೇಳಿ ಬರುವುದುಂಟು. ಆದರೆ, ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.