ನವದೆಹಲಿ, ಜ.4-ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣಗಳ ಪೈಕಿ ಅರ್ಧದಷ್ಟು ಸೋಂಕಿತರು ನಗರ ಪ್ರದೇಶದವರಾಗಿದ್ದು, ಮೂರನೆ ಅಲೆ ಶೀಘ್ರವೇ ಎದುರಾಗುವ ಸಾಧ್ಯತೆ ಇದೆ ಎಂದು ಕೋವಿಡ್ ಕಾರ್ಯನಿರ್ವಹಣಾ ಸಮೂಹದ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.
ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸೋಂಕಿನ ಮೇಲೆ ತೀವ್ರ ನಿಗಾವಹಿಸಿದ್ದು, ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಪರಿಸರ ಸಾಮ್ಯತೆ ಬಗ್ಗೆ ಅಧ್ಯಯನ ನಡೆಸುತ್ತಿದೆ.
ದಕ್ಷಿಣ ಆಫ್ರಿಕಾ ಮೂಲದ ಓಮಿಕ್ರಾನ್ ಕಳೆದ ಎರಡು ವಾರಗಳಿಂದ ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿದೆ. ಬಹಳಷ್ಟು ಸೋಂಕಿತರಲ್ಲಿ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಒಂದು ವೇಳೆ ಕಂಡು ಬಂದರೂ ಸಣ್ಣಪುಟ್ಟ ಅನಾರೋಗ್ಯವಷ್ಟೇ ಇರಲಿದೆ. ಸದ್ದಿಲ್ಲದೆ ಹರಡುತ್ತಿರುವ ಓಮಿಕ್ರಾನ್ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಅಗತ್ಯ. ಆದರೆ, ಅನಗತ್ಯವಾಗಿ ಆತಂಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾಗಿಂತಲೂ ಭಾರತದಲ್ಲಿ ಹಲವು ಪಟ್ಟು ಲಸಿಕೆ ನೀಡಲಾಗಿದೆ. ಹೀಗಾಗಿ ರೂಪಾಂತರಿ ಸೋಂಕು ನಮ್ಮಲ್ಲಿ ಉಂಟು ಮಾಡುವ ಅಪಾಯ ಮಟ್ಟದ ಕಡಿಮೆಯಾಗಬಹುದು. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ನಿಯಂತ್ರಣದಲ್ಲಿರುವ ಆಶಾಭಾವನೆ ಇದೆ ಎಂದು ಹೇಳಿದ್ದಾರೆ.
ಕಳೆದ 10 ದಿನಗಳಿಂದಲೂ ಕೋವಿಡ್ ಸೋಂಕಿನ ಪ್ರಕರಣದಲ್ಲಿ ಏರಿಕೆಯಾಗುತ್ತಿದೆ. ಇದನ್ನು ಗಮನಿಸಿದರೆ ನಾವು ಶೀಘ್ರವಾಗಿ ಮೂರನೆ ಅಲೆಗೆ ಎದುರಾಗಬೇಕಾಗಿದೆ. ಅದಕ್ಕೆ ಅಗತ್ಯವಾದ ಪೂರ್ವ ತಯಾರಿಗಳನ್ನು ಸರ್ಕಾರ ಕೈಗೊಂಡಿದೆ ಎಂದು ವಿವರಿಸಿದ್ದಾರೆ.
ದೇಶದ 23 ರಾಜ್ಯಗಳಲ್ಲಿ ಒಟ್ಟು 1892 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, 37,379 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಐದು ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದ್ದರೆ, ನಗರ ಪ್ರದೇಶಗಳಲ್ಲಿ ಓಮಿಕ್ರಾನ್ ಹೆಚ್ಚಾಗಿ ಕಂಡು ಬರುತ್ತಿದೆ.
