ಚೀನಾದಲ್ಲಿ ಅಬ್ಬರಿಸುತ್ತಿದೆ ಕೊರೋನಾ, ಶಾಂಘೈನಲ್ಲಿ 39 ಸಾವು..!

ಬೀಜಿಂಗ್, ಏ. 24- ತವರೂರು ಚೀನಾದಲ್ಲಿ ಕೋವಿಡ್ ಸೋಂಕು ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ನಿನ್ನೆ ಒಂದೆ ದಿನ 39 ಮಂದಿಯನ್ನು ಬಲಿ ಪಡೆದಿದೆ. ದೇಶದ ಆರ್ಥಿಕ ಕೇಂದ್ರ ಶಾಂಘೈನಲ್ಲಿ ಸೋಂಕಿನ ಅಬ್ಬರ ತೀವ್ರವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಶನಿವಾರ 21,796 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಶಾಂಘೈನಲ್ಲೇ 1,566 ಸಕಾರಾತ್ಮಕ ಪ್ರಕರಣಗಳು ಮತ್ತು ಉಳಿದ ಪ್ರಕರಣಗಳು ಲಕ್ಷಣ ರಹಿತವಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ಮಾಹಿತಿ ಬಿಡುಗಡೆ ಮಾಡಿದೆ.

ಚೀನಾದ ರಾಜಧಾಣಿ ಬೀಜಿಂಗ್‍ನಲ್ಲಿ 22 ಹೊಸ ಪ್ರಕರಣಗಳು ಪತ್ತೆಯಾದ ಬಳಿಕ ಮತ್ತಷ್ಟು ಕಠಿಣ ಎಚ್ಚರಿಕೆಗಳನ್ನು ಅನುಷ್ಠಾನಕ್ಕೆ ತರಲಾಗಿವೆ. ಹಿಂದಿನ ದಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳ ಪಡಿಸಿದಾಗ 10 ಮಂದಿಗೆ ಸೋಂಕು ಇರುವುದು ಖಚಿತವಾಗಿತ್ತು. ತಕ್ಷಣವೇ ಅಧಿಕಾರಿಗಳು ಒಂದು ವಾರ ಕಾಲ ಶಾಲಾ ತರಗತಿಗಳನ್ನು ಬಂದ್ ಮಾಡಿದ್ದರು.

ಬೀಜಿಂಗ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್‍ನ ಉಪನಿರ್ದೇಶಕ ಪಾಂಗ್ ಕ್ಸಿಂಗುವೋ, ಹೊಸ ಪ್ರಕರಣಗಳು ಒಂದು ವಾರದ ಹಿಂದೆ ನಗರದಲ್ಲಿ ಪ್ರಾರಂಭವಾಗಿವೆ. ಈ ಸೊಂಕು ಇತರ ಶಾಲೆಗಳು, ಪ್ರವಾಸಿ ಗುಂಪುಗಳು ಮತ್ತು ಕುಟುಂಬಗಳನ್ನು ವ್ಯಾಪಿಸಿರಬಹುದು ಎಂಬ ಶಂಕೆ ವ್ಯಕ್ತ ಪಡಿಸಿದ್ದಾರೆ.

ಪ್ರವಾಸಕ್ಕೆ ಬಂದಿದ್ದ ಗುಂಪುಗಳಲ್ಲಿದ್ದ ಹಿರಿಯ ನಾಗರಿಕರು, ಕಟ್ಟಡ ಕಾರ್ಮಿಕರು ಮತ್ತು ಕ್ಲಸ್ಟರ್ ಗುರುತಿಸಲಾದ ಶಾಲೆಯಲ್ಲಿ ಕೆಲಸ ಮಾಡುವ ಜನರನ್ನು ಸಾಮೂಹಿಕ ಪರೀಕ್ಷೆಗೊಳಪಡಿಸುವುದಾಗಿ ಎಂದು ಪಾಂಗ್ ತಿಳಿಸಿದ್ದಾರೆ.

ಬೀಜಿಂಗ್ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಕೈ ಕಿ, ಮೇಯರ್ ಚೆನ್ ಜಿನಿಂಗ್ ಮತ್ತು ನಗರ ಇತರ ನಾಯಕರು ಎರಡು ಭಾರಿ ಸೇರಿ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು. ಇದ್ದಕ್ಕಿದ್ದಂತೆ ಬೀಜಿಂಗ್ ಕೆಲವು ಪ್ರಕರಣಗಳು ವರದಿಯಾಗಿದ್ದರಿಂದ ಆತಂಕ ಹೆಚ್ಚಾಗಿದೆ. ಪ್ರಸರಣ ಅಪಾಯ ಹೆಚ್ಚಿರುವುದರಿಂದ ತುರ್ತು ಮತ್ತು ಕಠೋರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೀಜಿಂಗ್ ಡೈಲಿ ವರದಿ ಮಾಡಿದೆ.

ಈವರೆಗೂ ಶಾಂಘೈ ಓಮಿಕ್ರಾನ್ ರೂಪಾಂತರದ ಕೇಂದ್ರಬಿಂದುವಾಗಿತ್ತು. ಶಾಂಘೈ ಹೊರತುಪಡಿಸಿ, ಇತರ 16 ಪ್ರಾಂತೀಯ ಮಟ್ಟದಲ್ಲೂ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಜಿಲಿನ್‍ನಲ್ಲಿ 60, ಹೈಲಾಂಗ್‍ಜಿಯಾಂಗ್‍ನಲ್ಲಿ 26 ಮತ್ತು ಬೀಜಿಂಗ್‍ನಲ್ಲಿ 22 ಸೇರಿವೆ ಎಂದು ವರದಿಯಾಗಿದೆ.
ದೇಶಾದ್ಯಂತ 29,531 ಸಕ್ರಿಯ ಪ್ರಕರಣಗಳಿದ್ದು, ಜನ ಕರೋನ ವೈರಸ್‍ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ಶಾಂಘೈ 23,370 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಮಾರ್ಚ್ 1 ರಿಂದ ಈವರೆಗೆ ಸೋಂಕಿನ ಪ್ರಕರಣಗಳ ಸಂಖ್ಯೆ ಒಟ್ಟು 4.66 ಲಕ್ಷಕ್ಕೆ ತಲುಪಿದೆ. 26 ಮಿಲಿಯನ್ ಜನರಿರುವ ಶಾಂಘೈ ನಗರದಲ್ಲಿ ಶನಿವಾರ 39 ಸಾವುಗಳಾಗಿವೆ. ಕಳೆದ ತಿಂಗಳ ಕೊನೆಯಲ್ಲಿ ಲಾಕ್‍ಡೌನ್ ಜಾರಿಯಾದಾಗಿನಿಂದ ಇದುವರೆಗೆ ಸಾವಿನ ಸಂಖ್ಯೆ 87ರಷ್ಟಾಗಿದೆ.

2019 ರ ಡಿಸೆಂಬರ್‍ನಲ್ಲಿ ವುಹಾನ್‍ನಲ್ಲಿ ಮೊದಲ ಬಾರಿಗೆ ಕೋವಿಡ್ ಕಾಣಿಸಿಕೊಂಡಾಗಿನಿಂದ ಚೀನಾದ ಒಟ್ಟಾರೆ ಸಾವಿನ ಸಂಖ್ಯೆ 4,725ರಷ್ಟು ಎಂದು ವರದಿ ಮಾಡಲಾಗಿದೆ.