BIG NEWS: ಮಹಾರಾಷ್ಟ್ರದ 10 ಸಚಿವರು, 20 ಶಾಸಕರಿಗೆ ಕೊರೊನಾ ಸೋಂಕು

Social Share

ನವದೆಹಲಿ, ಜ.1- ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮೂರನೇ ಅಲೆ ಖಚಿತಗೊಳ್ಳುವ ಮೂನ್ಸೂಚನೆ ಸಿಕ್ಕಿದ್ದು, ಜನಸಾಮಾನ್ಯರನ್ನಷ್ಟೆ ಅಲ್ಲ ಶಾಸಕರು, ಸಚಿವರನ್ನೂ ಕೊರೊನಾ ಕಾಡಲಾರಂಭಿಸಿದೆ. ಮಹಾರಾಷ್ಟ್ರದಲ್ಲಿ 10 ಮಂದಿ ಸಚಿವರು ಹಾಗೂ ಇಬ್ಬತ್ತು ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಹಲವು ಮುನ್ನೆಚ್ಚರಿಕೆಗಳ ಹೊರತಾಗಿಯೂ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಮತ್ತು ಓಮಿಕ್ರಾನ್ ಸೋಂಕಿತರ ಸಂಖ್ಯೆ ತೀವ್ರವಾಗಿದೆ. ಸರ್ಕಾರದ ನಿರಂತರ ಮನವಿಗಳ ಹೊರತಾಗಿಯೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಅಜಿತ್ ಪವಾರ್ ಹೇಳಿದರು.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಶನಿವಾರದ ಸೋಂಕಿನ ಪ್ರಕರಣಗಳ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. ದೇಶದ 23 ರಾಜ್ಯಗಳಲ್ಲಿ 1431 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಆತಂಕಕಾರಿ ಬೆಳವಣಿಗೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 22,775ಕ್ಕೆ ಹೆಚ್ಚಳವಾಗಿದೆ, 24 ಗಂಟೆಯಲ್ಲಿ ಒಟ್ಟು 406 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
275 ದಿನಗಳ ಬಳಿಕ ಅತಿ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿರುವುದು ಮೂರನೇ ಅಲೆಯ ಮುನ್ಸೂಚನೆ ನೀಡಿದೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,48,61,579ರಷ್ಟಾಗಿದೆ. ಮಹಾರಾಷ್ಟ್ರದಲ್ಲಿ 8,067, ಪಶ್ಚಿಮ ಬಂಗಾಳದಲ್ಲಿ 3451 ಸೋಂಕಿತರಿದ್ದು, ಕೇರಳದಲ್ಲಿ 2,676 ಪ್ರಕರಣಗಳು ವರದಿಯಾಗಿ,353 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 1,155 ಸೋಂಕಿನ ಪ್ರಕರಣಗಳಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ 832 ಸೋಂಕಿನ ಪ್ರಕರಣಗಳು, 8 ಸಾವು ವರದಿಯಾಗಿವೆ. ಹರ್ಯಾಣದಲ್ಲಿ 427, ಉತ್ತರ ಪ್ರದೇಶದಲ್ಲಿ 246, ಪಂಜಾಬ್ 216, ಅಸ್ಸಾಂನಲ್ಲಿ 192, ರಾಜಸ್ತಾನದಲ್ಲಿ 208, ಬಿಹಾರದಲ್ಲಿ 158, ಆಂಧ್ರಪ್ರದೇಶದಲ್ಲಿ 166, ಚತ್ತಿಸ್‍ಗಡದಲ್ಲಿ 190 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಒಟ್ಟು ಪ್ರಕರಣಗಳಲ್ಲಿ ಶೇ.75ರಷ್ಟು ಸೋಂಕಿತರು ಐದು ರಾಜ್ಯಗಳಲ್ಲೇ ವರದಿಯಾಗಿವೆ. ಅದರಲ್ಲಿ ಕರ್ನಾಟಕವೂ ಸೇರಿದೆ. ಸೋಂಕು ಹೆಚ್ಚುತ್ತಿರುವ ನಡುವೆ ಚೇತರಿಕೆಯ ಪ್ರಮಾಣವೂ ಸುಧಾರಣೆಯಾಗಿದೆ, ಶೇ.98.32ರಷ್ಟು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

Articles You Might Like

Share This Article