ಕೋವಿಡ್ ನಿಯಂತ್ರಣಕ್ಕೆ ತರಲು ಕಠಿಣ ನಿಯಮ ಅನಿವಾರ್ಯ: ಜನರ ಸಹಕಾರಕ್ಕೆ ಸಿಎಂ ಮನವಿ

Social Share

ಬೆಂಗಳೂರು,ಜ.3- ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಕಠಿಣ ನಿಯಮಗಳನ್ನು ಜಾರಿ ಮಾಡಿದರೆ ಸಾರ್ವಜನಿಕರು ಸಹಕರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಹುತೇಕ ಕಠಿಣ ನಿಯಮಗಳು ಇಲ್ಲವೇ ಲಾಕ್‍ಡೌನ್ ಜಾರಿಯಾಗುವ ಸುಳಿವನ್ನು ಪರೋಕ್ಷವಾಗಿ ಅವರು ನೀಡಿದ್ದಾರೆ.
ಇಂದಿನಿಂದ ರಾಜ್ಯಾದ್ಯಂತ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯದ ಬಿಬಿಎಂಪಿ ಶಾಲೆಯಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ದೇಶದಲ್ಲಿ ಒಂದು ಮತ್ತು 2ನೇ ಕೋವಿಡ್ ಅಲೆಯ ಉಂಟಾದಾಗ ಅದನ್ನು ಅತ್ಯಂತ ಯಶಸ್ವಿಯಾಗಿ ಕರ್ನಾಟಕದಲ್ಲಿ ನಿಭಾಯಿಸಿದ್ದೆವು.
ಈಗ ತಜ್ಞರು ಮತ್ತೆ 3ನೇ ಅಲೆ ಬರಬಹುದೆಂದು ತಿಳಿಸಿದ್ದಾರೆ, ಕಠಿಣ ನಿಯಮ ಜಾರಿಯಾದರೆ ನಿಮ್ಮೆಲ್ಲರ ಸಹಕಾರ ಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಾಳೆ ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಯಲಿದೆ. ಕೋವಿಡ್ ನಿಯಂತ್ರಣಕ್ಕೆ ತರಲು ಕೆಲವು ಕಠಿಣ ನಿಯಮಗಳು ಅನಿವಾರ್ಯ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಕೋವಿಡ್ ನಿಯಂತ್ರಿಸಲು ನಾವು ಈಗಾಗಲೇ ಅಗತ್ಯ ಪೂರ್ವ ಸಿದ್ದತೆಗಳನ್ನು ತೆಗೆದುಕೊಂಡಿದ್ದೇವೆ. ಗಡಿಯಲ್ಲಿ ಬಿಗಿ ತಪಾಸಣೆ, ಹೊರರಾಜ್ಯ ಮತ್ತು ವಿದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇವರಿಗೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್, ಟೆಸ್ಟಿಂಗ್ ಪ್ರಮಾಣ ಹೆಚ್ಚಳ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾಗಿ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 4,41,000 ವಿದ್ಯಾರ್ಥಿಗಳಿಗೆ ಹಾಗೂ ಬೆಂಗಳೂರಿನಲ್ಲಿ ಸುಮಾರು 40 ಸಾವಿರ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ಹಾಕುತ್ತಿದ್ದೇವೆ. ಯಾವುದೇ ರೀತಿಯ ಅಂಜಿಕೆ ದುಗುಡ, ದುಮ್ಮಾನ, ಭಯ ಯಾವುದನ್ನೂ ಇಟ್ಟುಕೊಳ್ಳದೆ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆಯನ್ನು ಪಡೆಯಬೇಕು ಎಂದು ಮನವಿ ಮಾಡಿದರು.
ವಿಶ್ವದಲ್ಲೇ ಕೋವಿಡ್ ಲಸಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿದ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ದೇಶದ ಪ್ರತಿಯೊಬ್ಬರಿಗೂ ಈಗಾಗಲೇ ಮೊದಲ ಹಂತದ ಕೋವಿಡ್ ಲಸಿಕೆಯನ್ನು ನೀಡಲಾಗಿದ್ದು, 2ನೇ ಹಂತದಲ್ಲೂ ನಿರೀಕ್ಷೆಗೂ ಮೀರಿದ ಗುರಿಯನ್ನು ತಲುಪಿದ್ದೇವೆ.
ಕರ್ನಾಟಕದಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಕೋವಿಡ್ ಲಸಿಕೆಯನ್ನು ಕೊಡಲಾಗಿದೆ. ನಮ್ಮ ಗುರಿ ಪ್ರತಿಯೊಬ್ಬರಿಗೂ ಪೂರ್ಣ ಪ್ರಮಾಣದ ಲಸಿಕೆ ನೀಡುವುದಾಗಿದೆ ಎಂದರು. ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಎಲ್ಲರ ಸಹಕಾರದಿಂದ ಕೋವಿಡ್‍ನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ರಾಜ್ಯದ ಜನರನ್ನು ರಕ್ಷಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ ಎಂಬ ತೃಪ್ತಿ ಇದೆ ಎಂದರು.
ಕಳೆದ ನಾಲ್ಕೈದು ತಿಂಗಳಿನಿಂದ ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಎಂದು ಸಮರ್ಥಿಸಿಕೊಂಡರು.
ನಗರಸಭೆಗಳಲ್ಲಿ ಸಚಿವರಾದ ಎಂಟಿಬಿ ನಾಗರಾಜ್, ಭೈರತಿ ನಾಗರಾಜ್ ಅವರುಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಜೀವದ ಹಂಗು ತೊರೆದು ಕೋವಿಡ್ ನಿಯಂತ್ರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ನಮಗೆಲ್ಲರಿಗೂ ಪ್ರೇರಣೆ. ಕೊರೊನಾ ಮಹಾಮಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಅನಾಹುತ ಸೃಷ್ಟಿಸುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. 1 ಮತ್ತು 2ನೇ ಅಲೆ ನಮಗೆ ಪಾಠ ಕಲಿಸಿದ್ದರಿಂದ ಸರ್ಕಾರ 3ನೇ ಅಲೆಯನ್ನು ಎದುರಿಸಲು ಸಜ್ಜಾಗಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಇಂದು ಲಸಿಕೆ ನೀಡುವ ಅಭಿಯಾನದಲ್ಲಿ ಭಾರತ ವಿಶ್ವದಲ್ಲೆ ಅತ್ಯಂತ ದೊಡ ಸಾಧನೆ ಮಾಡಿದೆ. ನಮ್ಮ ರಾಜ್ಯದಲ್ಲಿ ಒಟ್ಟು 43 ಲಕ್ಷ ಮಕ್ಕಳು ಲಸಿಕೆ ಪಡೆಯಲು ಅರ್ಹತೆ ಪಡೆದಿದ್ದಾರೆ. ಆದಷ್ಟು ಬೇಗ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದರು.
ಈ ದೇಶದಿಂದ ಸಾಂಕ್ರಾಮಿಕ ರೋಗ ತೆಗೆದು ಹಾಕಿದ್ದೇವೆ ಎಂದರೆ ಅದು ಲಸಿಕೆಯಿಂದ ಮಾತ್ರ. ಕೋವಿಡ್ ನಿರ್ನಾಮಕ್ಕೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ದರ ತುಂಬ ಕಡಿಮೆಯಿದೆ. ಮುಖ್ಯಮಂತ್ರಿ ಕಾಲಕಾಲಕ್ಕೆ ತೆಗೆದುಕೊಂಡು ನಿರ್ಧಾರಗಳಿಂದ ಇದು ಯಶಸ್ವಿಯಾಗಿದೆ. ರಾಜ್ಯದಲ್ಲಿ 8.65 ಕೋಟಿ ಮಂದಿಗೆ ಮಾಹಿತಿ ನೀಡಿದರು. ಇಡೀ ದೇಶದಲ್ಲಿ 145 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಯಾವುದೇ ರೀತಿಯ ಆತಂಕ ಇಟ್ಟುಕೊಳ್ಳದೆ ಲಸಿಕೆ ಪಡೆಯಿರಿ. ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನರ ಆರೋಗ್ಯಕ್ಕಾಗಿ ಹೆಚ್ಚು ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ, ಬಿಬಿಎಂಪಿ ಅಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article