ಶುರುವಾಗಿದೆ ಕೋವಿಡ್ 4ನೇ ಅಲೆ, 27ರ ನಂತರ ಮತ್ತೆ ಬಿಗಿ ರೂಲ್ಸ್..!?

ಬೆಂಗಳೂರು,ಏ.24- ಕೋವಿಡ್ ಹೊಸ ರೂಪಾಂತರ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಂಭವನೀಯ ಅಪಾಯಕಾರಿ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.

ಕೋವಿಡ್ 1 ಮತ್ತು 2ನೇ ಅಲೆ ಭಾರೀ ಅನಾಹುತಗಳನ್ನೇ ಸೃಷ್ಟಿಸಿತ್ತು. ಜನಜೀವನ, ಆರ್ಥಿಕ ವ್ಯವಸ್ಥೆ ಕುಸಿದು ಹೋಗಿ ಹತಾಶ ಪರಿಸ್ಥಿತಿಗಳು ಎದುರಾಗಿದ್ದವು. ಆ ವೇಳೆ ಲಾಕ್‍ಡೌನ್ ಸೇರಿದಂತೆ ನಾನಾ ರೀತಿಯ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ 3ನೇ ಅಲೆ ನಿರುಪದ್ರವಿಯಾಗಿತ್ತು.  ಹೆಚ್ಚಿನ ಹಾನಿಯಾಗಲಿಲ್ಲ. ಪ್ರಾಣಿಹಾನಿ, ಸೋಂಕಿನ ತೀವ್ರತೆಗಳು ಪ್ರಾಣ ಕಂಟಕವಾಗಿರಲಿಲ್ಲ.

ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‍ನ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿವೆ. ಶಾಲಾಕಾಲೇಜುಗಳಲ್ಲಿ ಭೌತಿಕ ತರಗತಿಗಳು, ಪರೀಕ್ಷೆಗಳು ಆರಂಭಗೊಂಡಿವೆ. ವಾಣಿಜ್ಯ ಚಟುವಟಿಕೆಗಳು ಚೇತರಿಕೆ ಕಂಡಿವೆ. ಮಾಲ್‍ಗಳು, ಸಿನಿಮಾ ಮಂದಿರ, ಒಳಾಂಗಣದ ಕಾರ್ಯಕ್ರಮಗಳು ಎಲ್ಲವೂ ಎಂದಿನಂತೆ ನಡೆಯುತ್ತಿವೆ. ಈ ಹಂತದಲ್ಲೇ ಮತ್ತೆ ನಾಲ್ಕನೇ ಅಲೆಯ ಭೀತಿ ಎದುರಾಗಿದೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯ ಪ್ರಕಾರ ರಾಜ್ಯದಲ್ಲಿ ಈಗಾಗಲೇ ಕೋವಿಡ್ ರೂಪಾಂತರದ ಸೋಂಕುಗಳು ಕಾಣಿಸಿಕೊಂಡಿವೆ. ಹೀಗಾಗಿ ನಾಲ್ಕನೇ ಅಲೆ ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯ ಸರ್ಕಾರಗಳ ಜೊತೆ ಏ.27ರಂದು ವರ್ಚುವಲ್ ಮಾದರಿಯಲ್ಲಿ ಸಭೆ ನಡೆಸಲಿದ್ದಾರೆ.

ಯಾವ ಯಾವ ರಾಜ್ಯದಲ್ಲಿ ಸೋಂಕು ಹೆಚ್ಚಿದೆ, ತೆಗೆದುಕೊಳ್ಳಬೇಕಾದ ಕ್ರಮಗಳೇನು? ವೈದ್ಯಕೀಯ ವ್ಯವಸ್ಥೆಯ ಸದೃಢತೆ ಮತ್ತು ಸಾಮಥ್ರ್ಯ, ಕೋವಿಡ್ ವಾರಿಯರ್‍ಗಳ ನಿಯೋಜನೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸಲಹೆ ಸೂಚನೆಯಗಳನ್ನು ನೀಡಲಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್ ಜಾಗೃತಿಗೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಕೇರಳ ಸೇರಿದಂತೆ ಅಲ್ಲಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರಧಾನಿಯವರು ಇದೇ 27ರಂದು ವಿಡಿಯೋ ಕಾನರೆನ್ಸ್ ಮೂಲಕ ಸಭೆ ನಡೆಸಿ ಸೂಚನೆಗಳನ್ನು ನೀಡಲಿದ್ದಾರೆ. ಬಳಿಕ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಹೇಳಿದರು.

ಕೋವಿಡ್ ನಿರ್ವಹಣೆಯಲ್ಲಿ ಈ ಹಿಂದಿನ ಅನುಭವಗಳನ್ನು ಆಧರಿಸಿ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಲಾಗುವುದು. ತಜ್ಞರು, ವಿಜ್ಞಾನಿಗಳ ಸಲಹೆ ಪಡೆಯಲಾಗುವುದು. ಏ.27ರ ನಂತರ ಮಾರ್ಗಸೂಚಿಗಳು ಪ್ರಕಾರ ಕೋವಿಡ್ ಶಿಷ್ಟಾಚಾರ ನಿಯಮಗಳನ್ನು ಸಿದ್ದಗೊಳಿಸಲಾಗುವುದು ಎಂದು ಹೇಳಿದ್ದಾರೆ.