ಬೂಸ್ಟರ್ ಲಸಿಕೆ ಹಾಕಿಸಿಕೊಂಡು ಪ್ರಾಣ ಉಳಿಸಿಕೊಳ್ಳಿ

Social Share

ಬೆಂಗಳೂರು,ಡಿ.22- ನಗರದಲ್ಲಿ ಮತ್ತೆ ಕೊರೊನಾ ಕಾಟ ಆರಂಭವಾಗುವ ಸಾಧ್ಯತೆ ಇರುವುದರಿಂದ ಇದುವರೆಗೂ ಬೂಸ್ಟರ್ ಡೋಸ್ ಪಡೆದುಕೊಳ್ಳದೆ ಇರುವವರು ಕೂಡಲೇ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೂಸ್ಟರ್ ಡೋಸ್‍ಗಳು ಲ್ಯಾಪ್ಸ್ ಆಗುತ್ತಿರುವುದರಿಂದ ಇದುವರೆಗೂ ಬೂಸ್ಟರ್ ಪಡೆದುಕೊಳ್ಳದವರೂ ಕೂಡಲೆ ಬೂಸ್ಟರ್ ಹಾಕಿಸಿಕೊಳ್ಳುವ ಮೂಲಕ ಸೋಂಕು ತಗುಲದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೊರೊನಾ ಹರಡದಂತೆ ನೋಡಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಿನ್ನೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಯಾವ ಯಾವ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ನಾವು ಸಮಿತಿಗೆ ಶಿಫಾರಸು ಮಾಡಿದ್ದೇವೆ. ಇಂದು ಸಂಜೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಪಾಲನೆಗೆ ಬಿಬಿಎಂಪಿ ಸಿದ್ದವಿದೆ ಎಂದು ಅವರು ಹೇಳಿದರು.

ಮತ್ತೆ ಕರೋನಾ ಹಾವಳಿ : ಚೀನಾ ಪರಿಸ್ಥಿತಿ ಭಾರತಕ್ಕೆ ಬರಲ್ಲ ಎಂದ ತಜ್ಞರು

ಆದರೂ ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಪದೇ ಪದೇ ಕೈ ತೊಳೆಯುವಂತಹ ಪ್ರಕ್ರಿಯೆಗಳನ್ನು ಮುಂದುವರೆಸುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಸೋಂಕು ಹರಡುವ ಮುನ್ನ ಎಚ್ಚರಿಕೆ ವಹಿಸುವ ಅಗತ್ಯವಿರುವುದರಿಂದ ಜನಸಂದಣಿ ಪ್ರದೇಶಗಳನ್ನು ಸಾರ್ವಜನಿಕರು ಅವೈಡ್ ಮಾಡುವುದು ಸೂಕ್ತ ಎಂದು ಅವರು ಕೇಳಿಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೈಗೊಳ್ಳುವ ನಿರ್ಣಯ ಇಡಿ ರಾಜ್ಯಕ್ಕೆ ಅನ್ವಯಿಸುವಂತೆ ಇರುತ್ತದೆ. ಅಲ್ಲಿನ ನಿರ್ಣಯವನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಹೊಸ ಮಾರ್ಗಸೂಚಿ: ಕೋವಿಡ್ ಪಾಸಿಟಿವಿಟಿ ದರ, ಸಕ್ರಿಯ ಪ್ರಕರಣ ಹಾಗೂ ವ್ಯಾಕ್ಸಿನೇಷನ್ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು ಮುಖ್ಯಮಂತ್ರಿಗಳಿಗೆ ನೀಡುವ ಮಾಹಿತಿಯನ್ನಾಧರಿಸಿ ಇಂದು ಅಥವಾ ನಾಳೆ ವೇಳೆಗೆ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸಧ್ಯದಲ್ಲೇ ಬರಲಿರುವ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ವರದಿಯಲ್ಲಿ ಏನಿದೆ: ಕೊರೊನಾ ಸೋಂಕು ಮತ್ತೆ ಹರಡದಿರಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಈಗಾಗಲೇ ಆರೋಗ್ಯ ಇಲಾಖೆಗೆ ವರದಿ ನೀಡಿದೆ. ಅವರು ನೀಡಿರುವ ವರದಿಯಲ್ಲಿ ಏನಿದೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ;

ಒಳಾಂಗಣ, ಹೊರಾಂಗಣ ಪ್ರದೇಶಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ , ಮಾಲ್, ಪಬ್, ಸಿನಿಮಾ ಹಾಗೂ ರೆಸ್ಟೋರೆಂಟ್‍ಗಳು, ಬಸ್, ಮೆಟ್ರೋ, ರೈಲು ಪ್ರಯಾಣಿಕರು ಹಾಗೂ ಹೈ ರಿಸ್ಕ್ ಖಾಯಿಲೆಯಿಂದ ಬಳಲುತ್ತಿರುವವರಿಗೆ ಮಾಸ್ಕ್ ಬಳಕೆ ಕಡ್ಡಾಯ ಮಾಡುವುದು.

ಕೇವಲ ಶೇ.21 ರಷ್ಟು ಪೂರ್ಣಗೊಂಡಿರುವ ಬೂಸ್ಟರ್ ಡೋಸ್ ಅನ್ನು ಎಲ್ಲರಿಗೂ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುವುದು. ಟೆಸ್ಟಿಂಗ್ ಹೆಚ್ಚಳ ಮಾಡುವುದು. ರೋಗಲಕ್ಷಣ ಇರುವವರಿಗೆ ಬೆಡ್ ವ್ಯವಸ್ಥೆ ಮತ್ತು ಚಿಕಿತ್ಸೆಯ ಪ್ರೋಟೋ ಕಾಲ್ ಪಾಲಿಸುವಂತೆ ಸೂಚಿಸುವುದು, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸುವುದು ಹಾಗೂ ಬೆಂಗಳೂರಿನಲ್ಲಿ ಸಿವೇಜ್ ವಾಟರ್ ಟೆಸ್ಟಿಂಗ್ ಮೂಲಕ ಕೊರೋನಾ ತಳಿಯ ಬಗ್ಗೆ ನಿಗಾ ವಹಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ವಿಮಾನ ಪ್ರಯಾಣಕ್ಕಿಂತ ದುಬಾರಿಯಾಯ್ತು ಖಾಸಗಿ ಬಸ್ ದರ

ನಗರದಲ್ಲಿ 1222 ಸಕ್ರಿಯ ಸೋಂಕು ಪ್ರಕರಣ: ನಿನ್ನೆವರೆಗೆ ನಗರದಲ್ಲಿ 18 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ.1.44 ರಷ್ಟಿದೆ. 24 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಇದುವರೆಗೂ ಯಾರೊಬ್ಬರೂ ಮೃತಪಟ್ಟ ವರದಿಯಾಗಿಲ್ಲ. ಒಟ್ಟಾರೆ ನಗರದಲ್ಲಿ 1222 ಸಕ್ರಿಯ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ ಒಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರೆಲ್ಲ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿರುವುದು ಕಂಡು ಬಂದಿದೆ.

Covid booster shot, BBMP, tushar girinath,

Articles You Might Like

Share This Article