ಬೆಂಗಳೂರು,ಜ.4- ಓಮಿಕ್ರಾನ್ ಭೀತಿ ನಡುವೆಯೇ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕು ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಕೆಲ ಶಾಲೆಗಳು ಈಗಾಗಲೇ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿವೆ. ಇನ್ನು ಹಲವು ಶಾಲೆಗಳು ಕಾದು ನೋಡುವ ತಂತ್ರದ ಮೊರೆ ಹೋಗಿವೆ.
ಶಾಲೆಗಳನ್ನು ಮುಚ್ಚುವ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನಲೆಯಲ್ಲಿ ಉಂಟಾಗಿರುವ ಗೊಂದಲದಿಂದ ಈ ರೀತಿಯಾಗುತ್ತಿದೆ ಎಂದು ಹೇಳಲಾಗಿದೆ.
ಆನ್‍ಲೈನ್ ತರಗತಿಗಳಿಗೆ ಶಿಫ್ಟ್ ಮಾಡುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಯಾವುದೇ ಅಸೂಚನೆ ಹೊರಡಿಸದಿದ್ದರೂ, ಮಕ್ಕಳ ಸುರಕ್ಷತೆಯ ಬಗ್ಗೆ ಗೊಂದಲ ಮತ್ತು ಪೋಷಕರ ಕಾಳಜಿಯನ್ನು ಉಲ್ಲೇಖಿಸಿ ಆಫ್‍ಲೈನ್ ತರಗತಿ ಸ್ಥಗಿತಕ್ಕೆ ಶಾಲೆಗಳು ಮುಂದಾಗುತ್ತಿವೆ ಎನ್ನಲಾಗಿದೆ.
ಕೆಲವು ಶಾಲೆಗಳ ಆಡಳಿತ ಮಂಡಳಿಗಳು ಭೌತಿಕ ತರಗತಿಗಳನ್ನು ಪುನಃ ತೆರೆಯದಿರಲು ನಿರ್ಧರಿಸಿವೆ.
ಭಾರತದಾದ್ಯಂತ ಆರ್ಕಿಡ್ಸ್ ಶಾಲೆಗಳ ಎಲ್ಲಾ 48 ಶಾಖೆಗಳಲ್ಲಿ ವರ್ಚುವಲ್ ತರಗತಿಗಳಿಗೆ ಬದಲಾಯಿಸಲು ನಿರ್ಧರಿಸಿವೆ. ಇದಕ್ಕೆ ಪೋಷಕರೂ ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಆಫ್‍ಲೈನ್ -ಆನ್‍ಲೈನ್ ತರಗತಿ ಶಾಲೆಗಳು ಮುಕ್ತ: ಸರ್ಕಾರ ಕೋವಿಡ್ ತಜ್ಞರ ಸಲಹೆಯನ್ನು ಅನುಸರಿಸುತ್ತಿದೆ ಮತ್ತು ಆನ್‍ಲೈನ್ ತರಗತಿಗಳಿಗೆ ಬದಲಾಯಿಸುವ ಯಾವುದೇ ನಿರ್ಧಾರವನ್ನು ಈವರೆಗೂ ತೆಗೆದುಕೊಂಡಿಲ್ಲ. ಶಾಲೆಗಳು ಅವುಗಳ ಅವಶ್ಯಕತೆಗೆ ಅನುಗುಣವಾಗಿ ಆನ್‍ಲೈನ್ ಅಥವಾ ಆಫ್‍ಲೈನ್‍ಗೆ ಹೋಗಲು ಮುಕ್ತವಾಗಿದೆ ಎಂದು ಶಿಕ್ಷಣ ಸಚಿವರ ಕಚೇರಿಯ ಮೂಲಗಳು ತಿಳಿಸಿವೆ.
ಕೋವಿಡ್-19 ಪ್ರಕರಣಗಳ ಉಲ್ಬಣ ಮತ್ತು ಓಮಿಕ್ರಾನ್ ರೂಪಾಂತರದಿಂದಾಗಿ ಆರ್ಕಿಡ್ಸ್ ಇಂಟರ್‍ನ್ಯಾಷನಲ್ ಶಿಕ್ಷಣ ಸಂಸ್ಥೆಯಡಿ ಬರುವ 16 ಶಾಲೆಗಳು ಆಫ್‍ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿದ್ದು, ಆನ್‍ಲೈನ್ ತರಗತಿ ನಡೆಸಲು ನಿರ್ಧರಿಸಿವೆ ಎಂದು ಹೇಳಲಾಗಿದೆ.
ಇನ್ನು ಕರ್ನಾಟಕದಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್‍ಗಳು (ಕೆಎಎಂಎಸ್) ಮುಖ್ಯಮಂತ್ರಿಗಳಿಗೆ ಜ್ಞಾಪನಾಪತ್ರವನ್ನು ಕಳುಹಿಸಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚದಂತೆ ಕೋರಿಕೊಂಡಿವೆ. ಶಿಕ್ಷಣ ಸಂಸ್ಥೆಗಳ ಬಸ್‍ಗಳನ್ನು ಬಳಸುವಾಗ ಮತ್ತು ಟ್ಯೂಷನ್‍ಗಳ ಸಮಯದಲ್ಲಿ ಮಕ್ಕಳಿಗೆ ಕಾಳಜಿ ವಹಿಸಲು ಎಸ್‍ಒಪಿಗಳನ್ನು ನೀಡುವಂತೆ ವಿನಂತಿಸಿದೆ.
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳ ಪೋಷಕರು ಶಾಲೆಗಳು ಆನ್‍ಲೈನ್‍ಗೆ ಹೋಗಬಹುದು, ಆದರೆ ಆಟದ ಸಮಯ, ಟ್ಯೂಷನ್‍ಗಳು ಅಥವಾ ಕುಟುಂಬ ಕೂಟಗಳಂತಹ ಚಟುವಟಿಕೆಗಳಲ್ಲಿ ಮಕ್ಕಳ ರಕ್ಷಣೆ ಸಮಸ್ಯೆಯಾಗಿಯೇ ಉಳಿದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೋವಿಡ್‍ನಿಂದಾಗಿ ಯಾವುದೇ ಮಗುವಿನ ಶಿಕ್ಷಣ ಅಪೂರ್ಣವಾಗಬಾರದು. ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕು ಮತ್ತು ಮೂರನೇ ಅಲೆಯನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ನೈರ್ಮಲ್ಯೀಕರಣದಂತಹ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ನಾಗೇಶ್ ಮನವಿ ಮಾಡಿದ್ದಾರೆ.
