ಬೆಂಗಳೂರು, ಜ.27- ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ವಿಧಿಸಿರುವ ನಿಯಮಗಳಿಗೆ ವಿನಾಯಿತಿ ನೀಡುವ ಕುರಿತಾಗಿ ತಜ್ಞರು ನೀಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಅವರು ಸರ್ಕಾರಕ್ಕೆ ವರದಿ ನೀಡಿದ ನಂತರ ನಿಯಮಗಳನ್ನು ಮುಂದುವರೆಸಬೇಕೋ, ಇಲ್ಲವೇ ವಿನಾಯಿತಿ ನೀಡಬೇಕೋ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಿರುವ ನಿಯಮಗಳಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ. ನಾವು ಏಕಾಏಕಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕಾಲಕಾಲಕ್ಕೆ ತಜ್ಞರು ನೀಡುವ ವರದಿಗಳನ್ನು ಆಧರಿಸಿ ಅನುಷ್ಠಾನ ಮಾಡುತ್ತೇವೆ ಎಂದರು.
ನಮ್ಮ ಸರ್ಕಾರ ಸ್ಪಂದನಾಶೀಲ ಸರ್ಕಾರವಾಗಿದ್ದು, ಜನರಿಗೆ ಯಾವಾಗಲೂ ಸ್ಪಂದಿಸುವ ಕೆಲಸ ಮಾಡುತ್ತದೆ. ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಮ್ಮ ಕರ್ತವ್ಯ. ಜನರ ಕಲ್ಯಾಣವೇ ನಮ್ಮ ಮೊದಲ ಗುರಿ ಎಂದು ತಿಳಿಸಿದರು.
ಸ್ಪಂದನಾಶೀಲ ಸರ್ಕಾರವಾಗಿರುವುದರಿಂದಲೇ ರೈತರ ಬೇಡಿಕೆಯಂತೆ ಜೋಳವನ್ನು ಬೆಂಬಲ ಬೆಲೆ ಮೂಲಕ ಖರೀದಿ ಮಾಡಲು ತೀರ್ಮಾನಿಸಿದೆವು. ಈಗ ರಾಗಿಯನ್ನು ಸಹ ಇದೇ ಮಾದರಿಯಲ್ಲಿ ಖರೀದಿಸಬೇಕೆಂಬ ಬೇಡಿಕೆ ಬಂದಿದೆ.
ಬೆಂಬಲ ಬೆಲೆ ಮೂಲಕ ಬೆಳೆಯನ್ನು ಖರೀದಿ ಮಾಡುವ ಸಂಬಂಧ ಸಂಪುಟದ ಉಪಸಮಿತಿ ಇದೆ. ಇವರು ನೀಡುವ ವರದಿ ನಂತರ ನಾವು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ. ಅಂತಿಮವಾಗಿ ರೈತರ ಪರವಾಗಿಯೇ ನಾವು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹುಟ್ಟುಹಬ್ಬ ಆಚರಣೆ ಇಲ್ಲ: ನಾಳೆ ನನ್ನ ಹುಟ್ಟುಹಬ್ಬ. ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿ ನಾಳೆಗೆ ಆರು ತಿಂಗಳ ಅವಧಿಯನ್ನು ಪೂರ್ಣಗೊಳಿಸುತ್ತಿದ್ದೇನೆ. ನಾನು ಇದುವರೆಗೂ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿಲ್ಲ ಎಂದು ಹೇಳಿದರು.
ಸರ್ಕಾರ ಕಳೆದ ಆರು ತಿಂಗಳಲ್ಲಿ ಜನರಿಗಾಗಿ ಯಾವೆಲ್ಲ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ, ಇವು ಎಷ್ಟರ ಮಟ್ಟಿಗೆ ಫಲಾನುಭವಿಗಳಿಗೆ ತಲುಪಿವೆ ಎಂಬುದರ ಕುರಿತಾಗಿ ಪಕ್ಷಿನೋಟದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಗುವುದು. ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲ. ಬಜೆಟ್‍ನಲ್ಲಿ ಯಾವೆಲ್ಲ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದೇವೆ ಎಂಬುದನ್ನು ಕಾದು ನೋಡಿ ಎಂದು ಸೂಚ್ಯವಾಗಿ ತಿಳಿಸಿದರು.
