24ಗಂಟೆಯೊಳಗೆ ಕೈಸೇರಲಿದೆ ಕೊರೊನಾ ರಿಪೋರ್ಟ್ : ಗೌರವ್ ಗುಪ್ತಾ

Social Share

ಬೆಂಗಳೂರು,ಜ.20- ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂ ದ ಕೊರೊನಾ ತಪಾಸಣೆ ನಡೆಸಿದ ಕೇವಲ 24 ಗಂಟೆಯೊಳಗೆ ತಪಾಸಣಾ ವರದಿ ಕೈಸೇರುವಂತೆ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ತಪಾಸಣೆಗೆ 318 ಟ್ರಯಾಜನ್ ಟೀಮ್‍ಗಳನ್ನು ರಚಿಸಲಾಗಿದೆ. ತಂಡದಲ್ಲಿ 3000ಕ್ಕೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ವಿವರಣೆ ನೀಡಿದರು.ನಗರದಲ್ಲಿ ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿರುವುದರಿಂದ ನಾವು ಸೋಂಕು ತಡೆಗಟ್ಟಲು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.
ನಗರದಲ್ಲಿ ಮೊಬೈಲ್ ಟೆಸ್ಟಿಂಗ್ ಹಾಗೂ ಮೊಬೈಲ್ ಟ್ರಯಾಜನ್ ಸೆಂಟರ್ ವ್ಯವಸ್ಥೆ ಮಾಡಲಾಗಿದೆ. ತಪಾಸಣೆ ನಡೆಸಿದ 24 ಗಂಟೆಯೊಳಗೆ ವರದಿ ನಮ್ಮ ಕೈ ಸೇರಲಿದೆ ಎಂದು ಗೌರವ್ ಗುಪ್ತಾ ತಿಳಸಿದರು.ಸೋಂಕಿತರಿಗೆ ಹಾಸಿಗೆ ಬೇಡಿಕೆ ಈಗಲೂ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿಯ ಟ್ರಯಾಜನ್ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅಗತ್ಯವಿರುವವರಿಗೆ ನಾವೇ ಹಾಸಿಗೆ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಹೀಗಾಗಿ ಹಾಸಿಗೆ ಅವಶ್ಯಕತೆ ಇರುವವರಿಗೆ ಈ ಭಾರಿ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.ನಮ್ಮಲ್ಲಿ ಕೊರೊನಾ ಡೆತ್ ರೇಟ್ ಕೂಡ ಕಡಿಮೆಯಾಗುತ್ತಿರುವುದು ಸಮಾಧನಕರ ವಿಷಯ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಪಪಡಿಸಿದರು.
ಒಂದು ವೇಳೆ ಯಾರಾದರೂ ಅಪಘಾತದಲ್ಲಿ ಮೃತಪಟ್ಟರು ಅಂತಹ ವ್ಯಕ್ತಿಗಳ ಮೃತದೇಹವನ್ನು ಕೊರೊನಾ ತಪಾಸಣೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಸೋಂಕು ತಗುಲಿದ್ದರೆ ಅವರದ್ದು ಕೊರೊನಾ ಡೆತ್ ಎಂದು ಪರಿಗಣಿಸಲಾಗುವುದು ಎಂದರು.
ಸೋಂಕು ಹೆಚ್ಚಳಗೊಳ್ಳುತ್ತಿರುವುದನ್ನು ಮನಗಂಡು ಸರ್ಕಾರ ನಾಳೆ ಮಹತ್ವದ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಲಿದೆ. ಸರ್ಕಾರ ನೀಡುವ ಸೂಚನೆಯನ್ನು ಚಾಚೂತಪ್ಪದೆ ಪಾಲಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Articles You Might Like

Share This Article