ಕೋವಿಡ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ : ಗೃಹ ಸಚಿವ ಆರಗ ಜ್ಞಾನೇಂದ್ರ

Social Share

ಬೆಂಗಳೂರು, ಜ.6- ಕೋವಿಡ್ ನಿಯಮಗಳನ್ನು ಯಾರೇ ಉಲ್ಲಂಘನೆ ಮಾಡಿ ದರೂ ಕಾನೂನು ಕ್ರಮ ಜರುಗಿಸ ಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ರಾಜ್ಯದ ಜನರ ಹಿತದೃಷ್ಟಿಯಿಂದ ಕೋವಿಡ್ ಸೋಂಕು ತೀವ್ರವಾಗಿ ಹರಡುವುದನ್ನು ತಡೆಯಲು ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆಯೇ ಹೊರತು ರಾಜಕಾರಣಕ್ಕಾಗಿ ಅಲ್ಲ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರ ಜೀವ ರಕ್ಷಣೆಗಾಗಿ ಜಾರಿ ಮಾಡಿರುವ ಮಾರ್ಗಸೂಚಿಗಳನ್ನು ತಪ್ಪದೆ ಎಲ್ಲರೂ ಪಾಲಿಸಬೇಕು. ಸಾರ್ವಜನಿಕರಿಗೊಂದು, ಕಾಂಗ್ರೆಸ್‍ಗೊಂದು, ಬಿಜೆಪಿಗೆ ಮತ್ತೊಂದು, ಜೆಡಿಎಸ್‍ಗೆ ಇನ್ನೊಂದು ಎಂಬ ರೀತಿಯಲ್ಲಿ ನಿಯಮಗಳಿಲ್ಲ. ಎಲ್ಲರಿಗೂ ಒಂದೇ. ನಿಯಮಗಳ ಪಾಲನೆಗೆ ಬಿಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಯಮ ಮೀರಿದರೆ ಕಾನೂನು ಕ್ರಮ ಆಗಲಿದೆ ಎಂದು ಎಚ್ಚರಿಸಿದರು.
ರಾಜಕಾರಣಕ್ಕಿಂತ ರಾಜ್ಯದ ಜನರ ಬದುಕು ಮುಖ್ಯ ಎಂಬುದನ್ನು ಕಾಂಗ್ರೆಸ್ ನಾಯಕರು ಆರ್ಥ ಮಾಡಿಕೊಳ್ಳಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜನಪರ ಯೋಚನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲದಿದ್ದರೆ ಬೆಂಕಿ ಬಿದ್ದ ಮನೆಯಲ್ಲಿ ಇರಿದಷ್ಟು ಲಾಭ ಎಂಬಂತಾಗುತ್ತದೆ ಎಂದು ಟೀಕಿಸಿದರು.
ಎರಡನೆ ಅಲೆಯಲ್ಲಿ ವಿಳಂಬ ಮಾಡಿದ್ದರಿಂದ ಎಷ್ಟು ಸಾವು-ನೋವು ಉಂಟಾಯಿತು. ಶವ ಸಂಸ್ಕಾರಕ್ಕೆ ಸ್ಮಶಾನಗಳಲ್ಲಿ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಕಠಿಣ ನಿರ್ಬಂಧಗಳಿಂದ ಹೊಟೇಲ್, ಉದ್ಯಮ, ಟ್ಯಾಕ್ಸಿ ಚಾಲಕರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಹಲವರ ಜೀವನಕ್ಕೆ ತೊಂದರೆಯಾಗುವುದು ನಿಜ. ಆದರೆ, ಪರ್ಯಾಯ ಮಾರ್ಗ ಏನಿದೆ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹರಡುವಿಕೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ ಎಂದರು.

Articles You Might Like

Share This Article