ನವದೆಹಲಿ, ಜ.3- ರೂಪಾಂತರಿ ಓಮಿಕ್ರಾನ್, ಕೋವಿಡ್ ಮೂರನೇ ಅಲೆಯ ನಡುವೆಯೂ ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಪ್ರೌಢಾವಸ್ಥೆಯ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭವಾಗಿದೆ. ಕೇಂದ್ರಾಡಳಿತ ಪ್ರದೇಶ ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಇಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಕೋವಿನ್ ಆಪ್‍ನಲ್ಲಿ ನಿನ್ನೆ ಸಂಜೆಯವರೆಗು ಆರು ಲಕ್ಷ ನೋಂದಣಿಯಾಗಿತ್ತು. ನೋಂದಣಿಯಾಗದೆ ಇದ್ದರು ನೇರವಾಗಿ ಲಸಿಕಾ ಸತ್ರಗಳಿಗೆ ಬಂದು ಕೋವ್ಯಾಕ್ಸಿನ್ ಡೋಸ್ ಪಡೆಯಲು ಅವಕಾಶ ಇದೆ. ಶಾಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಶಾಲೆಯೊಂದರಲ್ಲಿ ಪ್ರತಿ ದಿನ 50 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಭೌತಿಕ ತರಗತಿಗೆ ಹಾಜರಾಗದೆ ಆನ್‍ಲೈನ್ ಶಿಕ್ಷಣದಲ್ಲೇ ಇರುವ ಮಕ್ಕಳಿಗೆ ಮುಂದೊಂದು ದಿನ ನಿಗದಿ ಮಾಡಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದರ ಹೊರತಾಗಿ ಹತ್ತಿರದ ಲಸಿಕಾ ಸತ್ರಗಳಿಗೂ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿದೆ.
ಶಾಲೆಯಿಂದ ಹೊರಗುಳಿದಿರುವ ಈ ವಯೋಮಾನದ ಮಕ್ಕಳನ್ನು ಗುರುತಿಸಿ ಲಸಿಕಾ ಕೇಂದ್ರದಲ್ಲಿ ಲಸಿಕೆ ಕೊಡಿಸುವ ಅಭಿಯಾನವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ. ಶಾಲಾ ಮಕ್ಕಳಿಕೆ ಲಸಿಕೆ ಪಡೆದ ಬಳಿಕ ಮಾರನೇಯ ದಿನ ರಜೆ ನೀಡಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕಾ ಸತ್ರಗಳಿರುವ ಶಾಲೆಗಳ ಬಳಿ ಆ್ಯಂಬುಲೇನ್ಸ್ ಸಜ್ಜುಗೊಳಿಸಿ ಇರಿಸಲಾಗಿತ್ತು.
ಕೋವಿಡ್ ಸೋಂಕಿನ ನಿರೋಧಕವಾಗಿ ಕಳೆದ ಜನವರಿ 16ರಿಂದ ಲಸಿಕಾ ಅಭಿಯಾನ ಆರಂಭವಾಗಿದೆ. ಮೊದಲು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿತ್ತು. ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದ 45 ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಲಸಿಕೆ ಘೋಷಣೆಯಾಯಿತು. ಮುಂದಿನ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಸಮ್ಮತಿಸಿತ್ತು.
ಕೋವಿಡ್ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿಲದೆ ಎಂಬ ಆತಂಕ ವ್ಯಾಪಕವಾಗಿದೆ. ಹೀಗಾಗಿ ಮಕ್ಕಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಹೆಚ್ಚಾಗಿತ್ತು. ದೇಶಿಯ ಕಂಪೆನಿ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 12ರಿಂದ 18 ವರ್ಷದೊಳಗಿನವರಿಗೆ ನೀಡಲು ಕ್ಲಿನಿಕಲ್ ಪ್ರಯೋಗ ನಡೆದು ಅದರ ಫಲಿತಾಂಶ ಆಧರಿಸಿ ಡಿಸೆಂಬರ್ 24ರಂದು ಕೇಂದ್ರ ಸರ್ಕಾರದ ಔಷಧ ಗುಣಮಟ್ಟ ನಿಯಂತ್ರಣ ಮಹಾನಿರ್ದೇಶನಾಲಯ ಅಂಗೀಕಾರ ನೀಡಿತ್ತು. ಪ್ರೌಢಾವಸ್ಥೆಯವರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಡಿಸೆಂಬರ್ 27ರಂದು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಅದರಂತೆ ಇಂದಿನಿಂದ ಲಸಿಕೆ ನೀಡಿಕೆ ಆರಂಭವಾಗಿದೆ.
