ಬೆಂಗಳೂರು, ಜ.23- ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದರೂ ಅಪಾಯಕಾರಿ ವಾತಾವರಣವಿಲ್ಲ ಎಂದು ಮೈ ಮರೆಯದೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಏಳನೇ ದಿನಗಳ ನಂತರವೂ ರೋಗ ಲಕ್ಷಣಗಳು ಮುಂದವರೆದರೆ ಅಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಬೇಕು. ಜೊತೆ ಬೂಸ್ಟರ್ ಲಸಿಕೆ ಪಡೆಯುವಾಗ ತಜ್ಞರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಲಸಿಕೆ ನೀಡಲಾಗುತ್ತಿದೆ.
ಲಸಿಕೆ ಲಭ್ಯವಿದೆ ಎಂಬ ಕಾರಣಕ್ಕೆ ತಕ್ಷಣವೇ ಪಡೆಯುವುದು ಸೂಕ್ತವಲ್ಲ. ಕೋವಿಡ್ ಲಸಿಕೆಯ 2ನೆ ಡೋಸ್ ಪಡೆದ ಮೂರು ತಿಂಗಳ ಬಳಿಕ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಬೇಕು. ಈ ನಡುವೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರೆ ಅದು ವಾಸಿಯಾದ ಮೂರು ತಿಂಗಳವರೆಗೂ ಲಸಿಕೆ ಪಡೆಯಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ ರವಾನೆ ಮಾಡಿದೆ.
ಕೋವಿಡ್ ಸೋಂಕು ಕಾಣಿಸಿಕೊಂಡು ವಾಸಿಯಾದ ಬೆನ್ನಲ್ಲೆ ದೇಹದಲ್ಲಿ ಪ್ರತಿಕಾಯ ಶಕ್ತಿ ವ್ಯತ್ಯಯವಾಗಿರುತ್ತದೆ. ಅದು ತಹಬದಿಗೆ ಬರಲು ಸುಮಾರು 90 ದಿನಗಳ ಕಾಲಾವಕಾಶ ಬೇಕು. ಬಳಿಕವೇ ಮುನ್ನೆಚ್ಚರಿಕೆ ಲಸಿಕೆ ಪಡೆದರೆ ಅದು ಪರಿಣಾಮಕಾರಿಯಾಗಲಿದೆ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಪ್ರಸ್ತುತ ಶೇ.80ಕ್ಕೂ ಹೆಚ್ಚು ಮಂದಿಯಲ್ಲಿ ಶೀತ, ಜ್ವರ, ಕೆಮ್ಮು, ತಲೆ ನೋವು, ಮೈ ಕೈ ನೋವಿನಂತಹ ರೋಗ ಲಕ್ಷಣಗಳು ಸಾಮಾನ್ಯವಾಗಿವೆ. ಪರೀಕ್ಷೆ ಮಾಡಿಸಿಕೊಂಡರೆ ಕೋವಿಡ್ ಸೋಂಕು ಖಚಿತಗೊಳ್ಳುತ್ತದೆ. ಬಹಳಷ್ಟು ಮಂದಿ ಪರೀಕ್ಷೆಯನ್ನೆ ಮಾಡಿಸಿಕೊಳ್ಳದೆ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.
ಕೆಲವರಿಗೆ ಪದೇ ಪದೇ ರೋಗ ಲಕ್ಷಣಗಳು ಪುನರಾವರ್ತನೆಯಾಗುತ್ತಿದೆ. ಸೌಮ್ಯ ಲಕ್ಷಣಗಳಿವೆ ಅಪಾಯ ಇಲ್ಲ ಎಂದು ಮನೆಯಲ್ಲಿ ಚಿಕಿತ್ಸೆ ಪಡೆದು ನಿರ್ಲಕ್ಷ್ಯ ವಹಿಸುವುದು ಸೂಕ್ತವಲ್ಲ. ಒಂದು ವಾರದ ಬಳಿಕವೂ ರೋಗ ಲಕ್ಷಣಗಳು ಮುಂದುವರೆದರೆ ಅಥವಾ ಪುನರಾವರ್ತನೆಯಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿ ಹಂತದಲ್ಲೂ ಉಸಿರಾಟದ ವೇಗದ ಮೇಲೆ ನಿಗಾ ವಹಿಸಿರಬೇಕು. ಎರಡು ವಾರದ ಬಳಿಕವೂ ಜ್ವರ, ಕೆಮ್ಮು ಕಡಿಮೆಯಾಗದಿದ್ದರೆ ಮನೆ ಚಿಕಿತ್ಸೆಯನ್ನು ಅವಲಂಭಿಸದೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಎಚ್ಚರಿಸಲಾಗಿದೆ.
ಎರಡನೇ ಅಲೆಯಲ್ಲಿ ಉಂಟಾದಷ್ಟು ಅಪಾಯಕಾರಿ ಪರಿಸ್ಥಿತಿ ಮೂರನೇ ಅಲೆಯಲ್ಲಿ ಇಲ್ಲ, ರೋಗ ಲಕ್ಷಣಗಳು ಸೌಮ್ಯವಾಗಿವೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಇದೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಮೂತ್ರಪಿಂಡ, ಎಚ್‍ಐವಿ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಎಚ್ಚರಿಕೆಯಿಂದ ಇರಬೇಕು. ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ.
ದೇಶದಲ್ಲಿ ದೈನಂದಿನ ಕೋವಿಡ್ ಸೋಂಕಿನ ಪ್ರಮಾಣ ಮೂರು ಲಕ್ಷ ದಾಟಿದರೆ, ರಾಜ್ಯದಲ್ಲಿ 40 ಸಾವಿರ ಗಡಿ ದಾಟಿದೆ. ಬಹಳಷ್ಟು ಮಂದಿ ಸೋಂಕಿನ ರೋಗ ಲಕ್ಷಣಗಳಿಂದ ಬಳಲುತ್ತಿದ್ದಾರೆ. ತಲೆ ನೋವು, ಮೈ ಕೈ ನೋವು ಕಡಿಮೆಯಾಗುತ್ತಿಲ್ಲ. ಈ ಹಿಂದೆ ರೋಗ ಲಕ್ಷಣಗಳಿಲ್ಲದೆ ಕೋವಿಡ್ ದಾಳಿ ಮಾಡಿ ಪ್ರಾಣ ಹಾನಿ ಮಾಡುತ್ತಿತ್ತು.
ಈ ಭಾರಿ ರೋಗ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ಪ್ರಾಣಾಪಾಯದ ಪರಿಸ್ಥಿತಿ ಕಡಿಮೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪದೇ ಪದೇ ಪತ್ರ ಬರೆದು ಮುನ್ಸೂಚನಾ ಮಾಹಿತಿಗಳನ್ನು ರವಾನೆ ಮಾಡುತ್ತಿದೆ.
ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಸದ್ಯಕ್ಕೆ ಕಡಿಮೆ ಇದೆ. ಜನವರಿ ಅಂತ್ಯಕ್ಕೆ ಕೋವಿಡ್ ಕಡಿಮೆಯಾಗುವ ನಿರೀಕ್ಷೆಗಳಿದ್ದವು. ಆದರೂ ಸೋಂಕು ರೂಪಾಂತರಿ ಅವತಾರ ಮುಗಿಯದೇ ಇರುವುದರಿಂದ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
