61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರೇಜಿ ಸ್ಟಾರ್
ಬೆಂಗಳೂರು, ಮೇ 30- ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ 61ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡರು. ಸುಮಾರು ನಾಲ್ಕು ದಶಕಗಳ ಕಾಲ ರಣಧೀರನಾಗಿ ಚಿತ್ರರಂಗವನ್ನು ಆಳಿರುವ ರವಿಮಾಮ, ಬೆಳ್ಳಿತೆರೆಯ ಮೇಲೆ ಪ್ರೇಮಲೋಕ ಸೃಷ್ಟಿಸಿದ ಮಹಾನ್ ಕನಸುಗಾರ.
ಸಿನಿರಸಿಕರಿಗೆ ಅದರಲ್ಲೂ ಯುವ ಮನಸ್ಸುಗಳ ಹೃದಯಕ್ಕೆ ನಾಟುವ ಮತ್ತು ಮುಟ್ಟುವ ಚಿತ್ರಗಳನ್ನು ತೆರೆಯ ಮೇಲೆ ತಂದ ಕಿಲಾಡಿ ಕಲಾವಿದ. ರವಿಚಂದ್ರನ್ ಸಿನಿಮಾ ಬಿಡುಗಡೆಯಾಗಿದೆ ಎಂದರೆ ಎಲ್ಲಾ ತಂತ್ರಜ್ಞರು ತಪ್ಪದೆ ಸಿನಿಮಾ ನೋಡುತ್ತಿದ್ದರು.ಅಂದಿನ ಯಶಸ್ವಿ ಬಾಲಿವುಡ್ ನಿರ್ದೇಶಕರಾದ ಸುಭಾಷ್ ಗಾಯ್ ಅವರೇ ರವಿಚಂದ್ರನ್ ಅವರ ನಿರ್ದೇಶನವನ್ನು ಹಾಡಿ ಹೊಗಳಿದ್ದಾರೆ.
ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದರಲ್ಲೂ ಹೊಸತನ ಹುಡುಕುತ್ತಾರೆ. ತಮ್ಮ ತಂದೆ ಸ್ಥಾಪಿಸಿದ ನಂತರ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ.
ಬಾಲ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ವಿಲನ್ ಆಗಿ , ನಂತರ ನಟನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಕ್ರೇಜಿಸ್ಟಾರ್ ಆಗಿ ಮೆರೆದ ಈ ನಟ, ಇಂದಿನ ಅದೆಷ್ಟೋ ನಟರಿಗೆ ಸೂರ್ತಿ.
ಇದೇ ಸಂದರ್ಭದಲ್ಲಿ ಅವರ ಮುಂದಿನ ಚಿತ್ರ ರವಿ ಬೋಪಣ್ಣ ಟೀಸರ್ ಬಿಡುಗಡೆಯಾಗಿದೆ. ಇದನ್ನು ಟ್ವಿಟ್ಟರ್ನಲ್ಲಿ ಸ್ವತಃ ರವಿಚಂದ್ರನ್ ಅವರೇ ಶೇರ್ ಮಾಡಿಕೊಂಡಿದ್ದು, ಟೀಸರ್ ಭಾರೀ ಕುತೂಹಲ ಮೂಡಿಸಿದೆ. ಇದರ ಜೊತೆಗೆ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸಿರುವ ತ್ರಿವಿಕ್ರಮ ಜೂನ್ 24ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ವಿಕ್ಕಿ ನಾಯಕ ನಟನಾಗಿ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಪ್ರಾರಂಭದಿಂದಲೂ ಈ ಚಿತ್ರಕ್ಕೆ ಚಂದನವನದ ತಾರೆಯರು ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ತ್ರಿವಿಕ್ರಮನಿಗೆ ಸಾಥ್ ನೀಡಿದ್ದಾರೆ.
ರವಿಚಂದ್ರನ್ ಅವರ ಹುಟ್ಟುಹಬ್ಬದ ಅಂಗವಾಗಿ ತ್ರಿವಿಕ್ರಮ ತಂಡದಿಂದ ಪ್ಲೀಸ್ ಮಮ್ಮಿ ವೀಡಿಯೋ ಸಾಂಗ್ ಹರಿಬಿಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಈ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ರವಿ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. ಆಗಿನಿಂದಲೂ ಒಳ್ಳೆಯ ಸ್ನೇಹಿತರು. ಈಗಾಗಲೇ ಮನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಹೀರೋ ಆಗಿ ವಿಕ್ಕಿ ಲಾಂಚ್ ಆಗ್ತಿರೋದು ಖುಷಿಯ ವಿಚಾರ ಎಂದು ಶಿವರಾಜ್ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲನಟನಾಗಿ ವಿಕ್ಕಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡ ಅನುಭವವಿದೆ. ನನ್ನದೇ ನಟನೆಯ ಸಿನಿಮಾದಲ್ಲಿ ನನ್ನ ಚಿಕ್ಕ ವಯಸ್ಸಿನ ಪಾತ್ರ ನಿಭಾಯಿಸಿದ್ದಾರೆ. ನಾನು ಹಾಡು ಹಾಗೂ ಕೆಲವು ಸೀನ್ ನೋಡಿದ್ದೀನಿ. ವಿಕ್ಕಿ ಪಕ್ಕಾ ಮಾಸ್ ಲುಕ್ ಮತ್ತು ಚಾರ್ಮ್ ಇರುವಂಥ ನಟ. ತ್ರಿವಿಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಸಲಿ ಎಂದು ಶಿವಣ್ಣ ತಂಡಕ್ಕೆ ಮತ್ತು ರವಿಚಂದ್ರನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದಾರೆ. ಜತೆಗೆ ಚಿತ್ರರಂಗದ ನಟ, ನಟಿಯರು, ಗಣ್ಯರು ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.