ಬೆಂಗಳೂರು,ಫೆ.2- ವಯೋವೃದ್ಧೆಯ ಶವ ಸಂಸ್ಕಾರವನ್ನು ಮನೆಯ ಕಾಂಪೌಂಡ್ ಒಳಗೆ ಮಾಡಿದ ವಿಚಿತ್ರ ಘಟನೆ ನಗರದಲ್ಲಿ ನಡೆದಿದ್ದು ಇದಕ್ಕೆ ಸ್ಥಳೀಯರಿಂದ ತೀವ್ರ ಆಕ್ರೋಶ ಎದುರಾಗಿದೆ.
ನಗರದ ಪುಟ್ಟೇನಹಳ್ಳಿಯ ಪಾಂಡುರಂಗ ನಗರದಲ್ಲಿ ಮೃತರಾದ ವಯೋವೃದ್ಧೆಯನ್ನು ಕುಟುಂಬಸ್ಥರು ಅವರ ಮನೆಯ ಕಾಂಪೌಂಡ್ ಒಳಗೆ ಅಂತ್ಯ ಸಂಸ್ಕಾರ ಮಾಡಿದ್ದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಶವವನ್ನು ಹೊರತೆಗೆದು ಬೇರೆಡೆ ಹೂಳುವಂತೆ ಅಗ್ರಹಿಸಿದ್ದಾರೆ.
ಸ್ಥಳೀಯರ ವಿರೋಧದ ನಡುವೆಯೂ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೇಔಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಅಲ್ಲಿ ನೆರೆದವರ ಮೇಲೆ ಕಲ್ಲು ತೂರಿದ ಹೈಡ್ರಾಮ ನಡೆದಿದೆ.
ಇದಕ್ಕೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಜನವಸತಿ ಪ್ರದೇಶದಲ್ಲಿ ಈ ರೀತಿ ಅಂತ್ಯಕ್ರಿಯೆ ನಡೆಸಿರುವುದು ಸರಿಯಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ. ಈ ನಡುವೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವೃದ್ಧೆಯ ಸಂಬಂಧಿಕರು ಮತ್ತು ಸ್ಥಳೀಯರ ನಡುವೆ ಸಂಧಾನಕ್ಕೆ ಮುಂದಾಗಿದ್ದಾರೆ.