ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಬಂಧನ, 13.50 ಲಕ್ಷ ರೂ ವಶ

ಬೆಂಗಳೂರು,ಅ.27- ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 13.50 ಲಕ್ಷ ರೂ ಮತ್ತು ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸಹಕಾರನಗರ ಹೊಯ್ಸಳ ಗೌಡ(48) ಮತ್ತು ವೈಯಾಲಿಕಾವಲ್ ಕೋದಂಡರಾಮಪುರದ ನರಸಿಂಹಮೂರ್ತಿ(38) ಬಂಧಿತರು.

ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಅ.22ರಂದು ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಸನ್‍ರೈಸರ್ ಹೈದರಾಬಾದ್ ತಂಡಗಳಿಗೆ ಸಂಬಂಧಪಟ್ಟಂತೆ ಹಾಗೂ ಅ.23ರಂದು ಇತರೆ ಕ್ರಿಕೆಟ್ ಪಂದ್ಯಕ್ಕೆ ಬುಕ್ಕಿಂಗ್ ಮಾಡಿಕೊಳ್ಳಲು ತಯಾರಾಗಿ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಲೋಟಸ್‍ಬುಕ್9.ಐಒ ಎಂಬ ಆಪ್/ವೆಬ್‍ಸೈಟ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನು ನೋಡಿಕೊಂಡು ಮೊಬೈಲ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದರು.

ಈ ಹಿಂದೆ ನಡೆದ ಪಂದ್ಯಗಳಲ್ಲಿ ಬೆಟ್ಟಿಂಗ್ ಆಟ ಆಡಿ ಸೋತವರಿಂದ ಹಣ ಪಡೆದು ಗೆದ್ದವರಿಗೆ ಹಣ ಕೊಡಲು ಇಬ್ಬರು ಮಲ್ಲೇಶ್ವರಂ 11ನೇ ಕ್ರಾಸ್, ಲಕ್ಷ್ಮಿ ಜ್ಯೂಸ್ ಕಾರ್ನರ್ ಮುಂಭಾಗದ ರಸ್ತೆ ಬಳಿ ಇರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಬಂದಿದೆ. ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ವಿಶೇಷ ವಿಚಾರಣಾ ದಳದ ಪೊಲೀಸ್ ಇನ್‍ಸ್ಪಕ್ಟೆರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳ ವಶದಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಿಸಿದಂತೆ 13,50,000 ನಗದು ಹಾಗೂ ಎರಡು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಸಂದೀಪ್‍ಪಾಟೀಲ್ ಮತ್ತು ಉಪ ಪೊಲೀಸ್ ಆಯುಕ್ತ ಕೆ.ಪಿ.ರವಿಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ, ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಎನ್.ಹನುಮಂತರಾಯ ನೇತೃತ್ವದಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕೈಗೊಂಡಿದ್ದಾರೆ.