ದ್ರಾಕ್ಷಿ, ಮಾವು, ಟೊಮ್ಯಾಟೊ ಬೆಳೆಯುವ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು,‌ ಜೂ. 11- 2021-22ನೇ ಸಾಲಿನ ಮರು ವಿನ್ಯಾಸಗೊಳಿಸಿದ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಅವರನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಸಂಬಂಧಪಟ್ಟ ದ್ರಾಕ್ಷಿ, ಮಾವು ಬೆಳೆಗಳಿಗೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರಾದ ಮಾಹಾಂತೇಶ ಮುರಗೋಡ ತಿಳಿಸಿದ್ದಾರೆ.

ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ತಾಲ್ಲೂಕುಗಳಿಗೆ ದ್ರಾಕ್ಷಿ ಮತ್ತು ಮಾವು ಹಾಗೂ ನೆಲಮಂಗಲ ತಾಲ್ಲೂಕಿಗೆ ಮಾವು ಬೆಳೆಯನ್ನು ಬೆಳೆ ವಿಮೆ ಯೋಜನೆಗೆ ಒಳಪಡಿಸಲಾಗಿದೆ. ಆಯಾ ತಾಲ್ಲೂಕಿಗೆ ಸಂಬಂಧಪಟ್ಟ ಬೆಳೆಗಳಿಗೆ ವಿಮೆ ಮಾಡಿಸುವ ರೈತರು ಕೂಡಲೇ ನಿಗದಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಭೂಮಿ ಹೊಂದಿರುವ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಆಯಾ ತಾಲ್ಲೂಕಿನ ಯಾವುದಾದರೂ ರಾಷ್ಟ್ರೀಯ ಬ್ಯಾಂಕುಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ.

ಈ ಯೋಜನೆಯಲ್ಲಿ ಒಳಪಡಿಸಲಾಗುವ ಬೆಳೆಗಳಿಗೆ, ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದ ರೈತರು ನೋಂದಣಿ ಮಾಡಿಸಿಕೊಳ್ಳಬಹುದಾಗಿದ್ದು, ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಸಾಲ ಮಂಜೂರಾದ ಎಲ್ಲಾ ರೈತರನ್ನು ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಲ ಪಡೆದ ರೈತರು ಬೆಳೆ ವಿಮೆ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಛಿಸದೇ ಇದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.

ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರ್ ಗೆ 2,80,000 ರೂ.ಗಳ ವಿಮಾ ಮೊತ್ತವಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ 5 ರಷ್ಟು ಅಂದರೆ ರೂ.‌ 14,000 ಗಳಾಗಿರುತ್ತದೆ. ವಿಮಾ ಕಂತು ನೋಂದಾಯಿಸಿಕೊಳ್ಳಲು
ಜೂನ್ 30 ಕೊನೆಯ ದಿನವಾಗಿದೆ.

# ಮಾವು ಬೆಳೆಗೆ ಪ್ರತಿ ಹೆಕ್ಟೇರ್ ಗೆ 80,000 ರೂ.ಗಳ
ವಿಮಾ ಮೊತ್ತವಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5 ರಷ್ಟು ಅಂದರೆ 4,000 ರೂ. ಗಳಾಗಿರುತ್ತದೆ. ವಿಮಾ ಕಂತು ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.

# ಟೊಮ್ಯಾಟೊ ಬೆಳೆಗೆ ವಿಮೆ:
2021ನೇ ಸಾಲಿನ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಬೆಳೆದ ಟೊಮ್ಯಾಟೊ ಬೆಳೆಗೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲ್ಲೂಕಿನಲ್ಲಿ ಟೊಮ್ಯಾಟೊ ಬೆಳೆಯನ್ನು ಬೆಳೆ ವಿಮೆ ಯೋಜನೆಗೆ ಒಳಪಡಿಸಲಾಗಿದೆ.

ಟೊಮ್ಯಾಟೊ ಬೆಳೆಗೆ ಪ್ರತಿ ಹೆಕ್ಟೇರ್ ಗೆ 1,18,000 ರೂ.ಗಳ ವಿಮಾ ಮೊತ್ತವಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5ರಷ್ಟು ಅಂದರೆ 5,900 ರೂ ಗಳಾಗಿರುತ್ತದೆ. ವಿಮಾ ಕಂತು ನೋಂದಾಯಿಸಿಕೊಳ್ಳಲು ಜುಲೈ 15 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.

Sri Raghav

Admin