ಸರ್ಕಾರ ಉರುಳಿಸುವ ಯತ್ನಗಳು ಸಫಲವಾಗಲ್ಲ : ಸಿ.ಟಿ.ರವಿ

ರಾಯಚೂರು, ನ.6-ಯಾವ ಹಿನ್ನೆಲೆಯಲ್ಲಿ ದೇವೇಗೌಡರು ಸರ್ಕಾರ ಸುಭದ್ರವಾಗಿರಲಿ ಎಂದು ಹೇಳಿದ್ದಾರೆ ಗೊತ್ತಿಲ್ಲ. ಆದರೆ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಒಂದು ವೇಳೆ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ಸರ್ಕಾರ ಉರುಳಿಸಲು ನಡೆದಿರುವ ಯಾವ ಪ್ರಯತ್ನಗಳೂ ಸಫಲವಾಗುವುದಿಲ್ಲ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಆರು ಜನ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಸೆಳೆದಿತ್ತು. ಸಿ.ಭೈರೇಗೌಡರ ಸಿಡಿಯನ್ನ ವೀರಪ್ಪಮೊಯ್ಲಿ ಮೂಲಕ ಹೊರ ಬಿದ್ದಿತ್ತು. 1999-2004ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಮತ್ತು ಜೆಡಿಯು ಶಾಸಕರನ್ನು ತೆಕ್ಕೆಗೆ ಹಾಕಿಕೊಂಡಿತ್ತು. ಇದು ಯಾವ ಸೀಮೆಯ ರಾಜಕಾರಣ ಎಂದು ಪ್ರಶ್ನಿಸಿದರು.

ಚಲುರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ಅಹ್ಮದ್, ಶ್ರೀನಿವಾಸ್ ಯಾವ ಪಕ್ಷದಲ್ಲಿದ್ದರು. ಇವರನ್ನೆಲ್ಲ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲಿಲ್ವಾ? ಈಗ ಕಾಂಗ್ರೆಸ್ ಪಕ್ಷ ಬಿಜೆಪಿ ಬಗ್ಗೆ ಮಾತನಾಡುತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಬಂದಂಗಾಯ್ತು. ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದು ಕಿಡಿಕಾರಿದರು.

ಸಿಎಂ ಇಬ್ರಾಹಿಂರಂತಹವರು ರಾಜಕಾರಣದಲ್ಲಿ ಬೇಕಾ? ಒಂದು ಪಕ್ಷದಲ್ಲಿ ಉಪಮುಖ್ಯಮಂತ್ರಿ ಇದ್ದು ಅಹಿಂದ ರಾಜಕೀಯ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರು.