“ಅಲ್ಪಸಂಖ್ಯಾತರು ಎಂಬ ಗುರಾಣಿ ಹಿಡಿದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬಾರದು”

ಬೆಂಗಳೂರು,ಸೆ.14- ಅಲ್ಪಸಂಖ್ಯಾತರ ಗುರಾಣಿ ಹಿಡಿದು ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಸಚಿವ ಸಿ.ಟಿ.ರವಿ ಡ್ರಗ್ಸ್ ಜಾಲದಲ್ಲಿ ತಳುಕು ಹಾಕಿಕೊಂಡಿರುವ ಶಾಸಕ ಜಮೀರ್ ಅಹಮ್ಮದ್‍ಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಸರ್ಕಾರ ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅಲ್ಪಸಂಖ್ಯಾತ ಹೆಸರು ಹೇಳಿಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಷಡ್ಯಂತ್ರದ ಗುರಾಣಿ ಹಿಡಿಯುವುದು ಬೇಡ ಎಂದು ಹೇಳಿದರು.

ಡ್ರಗ್ ಜಾಲದಲ್ಲಿ ಯಾರೇ ಇದ್ದರೂ, ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ತನಿಖೆ ನಡೆಸುತ್ತಿದೆ. ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗುವ ಪ್ರಶ್ನೆಯೇ ಇಲ್ಲ. ಜಾತಿ, ಧರ್ಮ ನೋಡಿಕೊಂಡು ತನಿಖೆ ನಡೆಸುತ್ತಿಲ್ಲ ಎಂದು ಹರಿಹಾಯ್ದರು.

ಕಳ್ಳನ ಹೆಂಡತಿ ಯಾವತ್ತಿದ್ದರೂ ಒಂದು ದಿನ…. ಆಗಲೇಬೇಕು ಎಂದ ಅವರು ಕ್ಯಾಸಿನೋಗೆ ಹೋದರೆ ನೆಮ್ಮದಿ ಸಿಗುತ್ತದೆ ಎಂದು ಜಮೀರ್ ಹೇಳಿದ್ದಾರೆ. ಯಾವ ರೀತಿ ನೆಮ್ಮದಿ ಸಿಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಮೊದಲು ಜಮೀರ್ ಅವರ ಪಾಸ್‍ಪೋರ್ಟ್‍ನ್ನು ತನಿಖಾಧಿಕಾರಿಗಳು ಪರಿಶೀಲನೆ ಮಾಡಬೇಕು. ಮುಚ್ಚಿಟ್ಟರೆ ಸಂಶಯ ಮೂಡುತ್ತದೆ. ಮೊದಲು ಜನತೆಯ ಮುಂದೆ ಜಮೀರ್ ಇದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.

ಜಮೀರ್ ಅಹಮ್ಮದ್ ಮಾತಿನಲ್ಲಿ ಎಷ್ಟು ಸತ್ಯವಿದೆಯೋ ಅಥವಾ ಸುಳ್ಳು ಇದೆಯೋ ಎಂಬುದೇ ಸ್ವತಃ ಅವರಿಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಅವರ ಮಾತಿನಲ್ಲಿ ಸ್ಪಷ್ಟತೆ ಇಲ್ಲ. ಪ್ರತಿ ಸಂದರ್ಭದಲ್ಲೂ ಹೇಳಿಕೆಗಳನ್ನು ತಿರುಚುತ್ತಾರೆ ಎಂದು ದೂರಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ನಾನು ವಾಚ್‍ಮನ್ ಆಗಿ ಅವರ ಮನೆಯ ಗೇಟ್ ಕಾಯುತ್ತೇನೆ ಎಂದು ಹೇಳಿದ್ದರು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಜನರು ಯಾವಾಗ ಜಮೀರ್ ವಾಚ್‍ಮನ್ ಆಗುತ್ತಾರೆ ಎಂದು ಕೇಳುತ್ತಿದ್ದಾರೆ. ಇದಕ್ಕೆ ಅವರು ಉತ್ತರ ನೀಡಲಿ ಎಂದು ಆಗ್ರಹಿಸಿದರು.

ಇನ್ನು ಪ್ರಕರಣದ ಕಿಂಗ್‍ಪಿನ್ ಎಂದೇ ಹೇಳಲಾಗುತ್ತಿರುವ ಹಾಗೂ ಸದ್ಯ ತಲೆಮರೆಸಿಕೊಂಡಿರುವ ಫಾಸಿಲ್ ಜೊತೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇರುವ ಪೋಟೊವನ್ನು ಪ್ರದರ್ಶಿಸಿ ಇದು ಏನು ಹೇಳುತ್ತದೆ ಎಂದು ಪ್ರಶ್ನಿಸಿದರು.

ಈ ಫೆಪೋಟೊ ಜನ್ಮ ಜನ್ಮಾಂತರದ ಸಂಬಂಧ ಎಂದು ಹೇಳುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ಇವರ ಜೊತೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದರು ಎಂಬುದನ್ನು ಮುಖಭಾವ ಹೇಳುತ್ತದೆ. ಇದನ್ನು ಮರೆಮಾಚಲು ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ ಎಂದು ರವಿ ಟೀಕಿಸಿದರು.

ಇದು ಯಾವುದೋ ಕುಟುಂಬದ ಕಾರ್ಯಕ್ರಮ ಅಥವಾ ಅಪರಿಚಿತರ ಜೊತೆ ತೆಗೆಸಿಕೊಂಡ ಪೋಟೋವಂತೂ ಅಲ್ಲ. ಇದರ ಹಿಂದೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.

ಪ್ರಕರಣದ ತನಿಖೆ ನಡೆಯುತ್ತಿದೆ. ನಾನು ಈಗಲೇ ಯಾರನ್ನೂ ತಪ್ಪಿತಸ್ಥರು ಎಂದು ಹೇಳುವುದಿಲ್ಲ. ಅಂತಿಮವಾಗಿ ವಿಚಾರಣೆ ಮುಗಿದ ನಂತರ ಕಾನೂನಿನ ಪ್ರಕಾರವೇ ಯಾರಿಗೇ ಏನು ಶಿಕ್ಷೆಯಾಗಬೇಕೋ ಆಗುತ್ತದೆ. ತಪ್ಪು ಮಾಡದವರು ಹೆದರುವ ಅಗತ್ಯವಿಲ್ಲ ಎಂದರು.