ಕೋಡಿ”ಹುಳಿ” ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ನನಸಾಗಲ್ಲ : ಸಿ.ಟಿ ರವಿ

ಬೆಂಗಳೂರು,ಡಿ.14- ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಹಿಂದೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಳಸಿಕೊಂಡು ಅಧಿಕಾರಕ್ಕೆ ಬರುವ ಕನಸು ಕನಸಾಗಿಯೇ ಉಳಿದಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಗಿ ಕಾಂಗ್ರೆಸ್‍ಗೆ ತಿವಿದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೆಲವರು ಕೋಡಿಹುಳಿ ಅನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕೆಲವು ನಾಯಕರ ಕನಸು ಕನಸಾಗಿಯೇ ಉಳಿಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಸಾರಿಗೆ ನೌಕರರು ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಇದರ ಮುಂದಾಳತ್ವವನ್ನು ರೈತ ಸಂಘಟನೆಯ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿಕೊಂಡಿದ್ದಾರೆ.

ನಿನ್ನೆ ನಡೆದ ಸಂಧಾನ ಸಭೆಯು ವಿಫಲವಾಗಿದ್ದರ ಇದರ ಹಿಂದೆ ಕೋಡಿಹಳ್ಳಿ ಇದ್ದಾರೆ ಎಂಬುದು ಬಿಜೆಪಿ ಅನುಮಾನವಾಗಿದೆ. ಇದೀಗ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಜೆಪಿಯ ಹಲವು ನಾಯಕರು ತಿರುಗಿ ಬಿದ್ದಿದ್ದಾರೆ. ಸಚಿವ ಆರ್. ಅಶೋಕ್, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದರು.

ಈಗ ಮಾಜಿ ಸಚಿವ ಸಿ.ಟಿ ರವಿ ಕೂಡಾ ಕೋಡಿಹಳ್ಳಿ ವಿರುದ್ಧ ಕಿಡಿಕಾರಿದ್ದು ಅಲ್ಲದೆ ಇವರನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸನ್ನು ಕಾಣುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತಿವಿದಿದ್ದಾರೆ.