ಜೆಡಿಎಸ್ ಅದೃಷ್ಟದ ಕನಸು ನನಸಾಗಲ್ಲ : ಸಿ.ಟಿ.ರವಿ ವಾಗ್ದಾಳಿ

Social Share

ಬೆಂಗಳೂರು,ಫೆ.13- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಕೆಲವರು ಮತ್ತು ಅದೃಷ್ಟ ಹೊಡೆಯುತ್ತದೆ ಎಂದು ಕಾದು ಕುಳಿತಿದ್ದಾರೆ. ಆದರೆ ಅವರ ಕನಸು ನನಸಾಗುವುದಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಪರೋಕ್ಷವಾಗಿ ಜೆಡಿಎಸ್ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಮೇಲೆ ಮಾತನಾಡಿದ ಅವರು, 2018ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ನಮ್ಮ ಪಕ್ಷ 104 ಸ್ಥಾನ ಗಳಿಸಿದರೂ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಈ ಬಾರಿ ಅದೇ ಪರಿಸ್ಥಿತಿ ನಿರ್ಮಾಣವಾಗಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಕೆಲವರು ನಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಎಂದು ನಿರೀಕ್ಷಿಸಿದ್ದಾರೆ.

ಎಲ್ಲ ಕಾಲದಲ್ಲೂ ಲಾಟರಿ ಹೊಡೆಯುವುದಿಲ್ಲ. ಜೀವನದಲ್ಲಿ ಅದೃಷ್ಟ ಎನ್ನುವುದು ಒಂದೆರಡು ಬಾರಿ ಮಾತ್ರ ಬರುತ್ತದೆ ಎಂದು ಛಾಟಿ ಬೀಸಿದರು.ಯಾರ ಹಂಗಿಲ್ಲದೆ ಸರ್ಕಾರ ರಚನೆಯಾಗಬೇಕು ಎಂಬುದು ನನ್ನ ಆಶಯವಾಗಿದೆ.

2004 ಮತ್ತು 2018ರಲ್ಲಿ ವಿಕಲಾಂಗ ಮಗು ಹುಟ್ಟಿದಂತೆ ಮತ್ತೆ ಅಂತದೇ ಮಗು ಹುಟ್ಟಲಿ ಎಂದು ಕೆಲವರು ಆಶಿಸಿದ್ದಾರೆ. ವಿಕಲಾಂಗ ಮಗು ಹುಟ್ಟಿದೆ ಕಲೆಕ್ಷನ್ ಏಜೆಂಟ್ ಇಟ್ಟುಕೊಳ್ಳುತ್ತಾರೆ. ಇದನ್ನು ತಡೆಯಬೇಕು. ಅದಕ್ಕಾಗಿ ಒಳ್ಳೆಯ ಮಗು ಹುಟ್ಟುವ ಅಗತ್ಯವಿದೆ ಎಂದರು.

ಸಿ.ಟಿ.ರವಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪುರ್, ಸಿ.ಎಸ್.ಪುಟ್ಟರಾಜು, ಮಳವಳ್ಳಿ ಡಾ.ಅನ್ನದಾನಿ ಮತ್ತಿತರರು ತಿರುಗಿ ಬಿದ್ದರು. 2004 ಮತ್ತು 2018ರಲ್ಲಿ ನಾವೇನು ನಿಮ್ಮ ಮನೆಗೆ ಬಂದಿರಲಿಲ್ಲ. ಹೀಗೆ ಸರ್ಕಾರ ರಚನೆ ಮಾಡಲು ನಮ್ಮ ಬಳಿ ಬಂದಿದ್ದೀರಿ ಇದನ್ನು ಮರೆತು ಮಾತನಾಡಬೇಡಿ ಎಂದು ತಿರುಗೇಟು ನೀಡಿದರು. ಈ ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

ನಾವು ಈ ಬಾರಿ ಪಂಚರತ್ನ ಯೋಜನೆಯನ್ನು ಪ್ರಾರಂಭಿಸಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಜೆಡಿಎಸ್ 123 ಸ್ಥಾನಗಳನ್ನು ಪಡೆದು ಗೆಲುವು ಸಾಸಲಿದ್ದೇವೆ ಎಂದರು. ಬಿಜೆಪಿಯ ಬಿ ಟೀಮ್ ಅಂತ ಸಿದ್ಧರಾಮಯ್ಯ ಭಾಷಣ ಮಾಡಿದರು. ಆದರೆ ಅವರೊಂದಿಗೆ ಸೇರಿ ಕಾಂಗ್ರೆಸ್ ಸರಕಾರ ರಚನೆ ಮಾಡಿದರು.

12 ಗಂಟೆಯೊಳಗೆ ಹುಲಿ ಬಾಯಿಗೆ ಆಹಾರವಾದ ಇಬ್ಬರು

ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನಿಂದ ಸಿದ್ಧರಾಮಯ್ಯ ಸೋತರು . ನೈತಿಕ ರೀತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸರಕಾರ ರಚನೆಯಾಯಿತು. ನಂತರ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಬಿಜೆಪಿ ಸರಕಾರ ರಚನೆಯಾಯಿತು. ಜನರ ಮುಂದೆ ಅಗ್ನಿಪರೀಕ್ಷೆಗೆ ಹೋದಾಗ ಬೆಂಬಲ ಸಿಕ್ಕಿತು. ಯಾವುದೇ ಸಂದರ್ಭದಲ್ಲೂ ಜನರು ನಮ್ಮ ಮೇಲೆ ಅನುಮಾನ ಪಟ್ಟಿಲ್ಲ ಎಂದರು.

ಸಿ.ಟಿ.ರವಿ ಮಾತಿಗೆ ಕೆ.ಜೆ.ಜಾರ್ಜ್ ಆಕ್ಷೇಪಿಸಿ ಚುನಾವಣೆಯಲ್ಲಿ ಸೋತ ಹಲವು ನಿದರ್ಶನಗಳು ರಾಜ್ಯದಲ್ಲಿದೆ. ಬಿಜೆಪಿಯ ಎರಡು ಶಾಸಕರು ಮಾತ್ರ ಇದ್ದರು. ನಂತರ ಬಿಜೆಪಿ ಅಧಿಕಾರಕ್ಕೆ ಬಂದ ಉದಾಹರಣೆಯಿದೆ. ಚುನಾವಣೆಯ ಸೋಲು ಗೆಲುವು ಬಗ್ಗೆ ಸಿ.ಟಿ.ರವಿ ಹೇಳಿಕೆ ಸರಿಯಲ್ಲ ಎಂದರು.
ನಾನು ಡಬಲ್ ಇಂಜೀನ್ ಸರಕಾರದ ಪ್ರಯೋಜನವೇನು ಎಂದು ಹೇಳುತ್ತಿದ್ದೇನೆ. ನೀವು ಈಗ ಡಬಲ್ ಮೂಡ್ನಲ್ಲಿ ಇದ್ದೀರಿ ಎಂದು ಅರಸಿಕೆರೆ ಶಾಸಕ ಶಿವಲಿಂಗೆಗೌಡರನ್ನು ಸಿ.ಟಿ.ರವಿ ಛೇಡಿಸಿದರು.

ನಾನು ಶಿವಲಿಂಗೇಗೌಡರಿಗೆ ಹೇಳಿದ್ದೇ. ಏಣ್ಣೆ ಬರ್ತಾ ಇದೆ – ಕಣ್ಣು ಮುಚ್ಕೋಬೇಡಿ ಎಂದಿದ್ದೆ. ಆದರೆ ಅವರು ಕೇಳಲಿಲ್ಲ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ವೇಳೆ ಶಿವಲಿಂಗೆಗೌಡರರನ್ನು ಸಂಪರ್ಕಿಸಿದ್ದನ್ನು ಪರೋಕ್ಷವಾಗಿ ತಿಳಿಸಿದ ರವಿ, ಈಗ ಶಿವಲಿಂಗೇಗೌಡರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ ಎಂದರು.

ಸಿ.ಟಿ.ರವಿ ಮಾತಿಗೆ ತಿರುಗೇಟು ನೀಡಿದ ಶಾಸಕ ಶಿವಲಿಂಗೇಗೌಡರು, ನಾನು ಚಕ್ರವ್ಯೂಹದಲ್ಲಿ ಸಿಲುಕಿಲ್ಲ. ನಾನು ಅಭಿಮನ್ಯು ಆಗೋದಿಲ್ಲ. ನಾನು ಅರ್ಜುನ ಪಾತ್ರ ಹಾಕೋದು. ನಾನು ಅಭಿಮನ್ಯೂ ಪಾತ್ರ ಹಾಕಲ್ಲ. ಜನರ ಬೆಂಬಲ ಇರುವ ತನಕ ನಾನು ಅರ್ಜುನ. ಯಾರು ಅರ್ಜುನ – ಯಾರು ಅಭಿಮನ್ಯು ಎಂಬುದು ಗೊತ್ತಾಗಲಿದೆ. ದುರ್ಯೋಧನ ಯಾರು ಎಂಬುದು ನನಗೆ ಗೊತ್ತು. ನಾನು ಭೀಮನ ಪಾತ್ರ ಮಾಡಿದವನು ನಾನು ದುರ್ಯೋಧನ ಪಾತ್ರ ಹಾಕಿಲ್ಲ ಎಂದು ಸಿಡಿಮಿಡಿಗೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕೌರವರ ಕಡೆ ಭೀಮ ಇರಲ್ಲ ಎಂದಾಗ ಪಾಂಡವರು ಯಾರು? ಕೌರವರು ಯಾರು ಎಂಬುದು ಗೊತ್ತಾಗಲಿದೆ. ಜನರು ಅದನ್ನು ಶೀಘ್ರ ನಿರ್ಧಾರ ಮಾಡಲಿದೆ ಎಂದು ಶಿವಲಿಂಗೇಗೌಡರು ತಿರುಗೇಟು ಕೊಟ್ಟರು.

#CTRavi, #JDS, #AssemblyElections2023,

Articles You Might Like

Share This Article