ಬೆಂಗಳೂರು,ಫೆ.18- ಸಚಿವ ಈಶ್ವರಪ್ಪ ತಪ್ಪೇ ಮಾಡದೇ ಇರುವಾಗ ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರು ರಾಷ್ಟ್ರಗೀತೆ ಕುರಿತು ಎಲ್ಲಿಯೂ ಅಪಮಾನ ಮಾಡಿಲ್ಲ. ಅವರು ಅಗೌರವನ್ನು ತೋರಿಸುವಂತಹ ಏನೂ ಮಾಡಿಲ್ಲ. ಅವರು ಏಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ರಾಷ್ಟ್ರಗೀತೆ ಬಗ್ಗೆ ನಮಗೆ ಎಷ್ಟು ಗೌರವವಿದೆಯೋ ಕೇಸರಿ ಧ್ವಜಕ್ಕೂ ಅಷ್ಟೇ ಗೌರವವಿದೆ. ಕೇಸರಿ ಶಾಂತಿ ಮತ್ತು ಸ್ಪೂರ್ತಿಯ ಸಂಕೇತ. ಈಶ್ವರಪ್ಪ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.ಕಾಂಗ್ರೆಸ್‍ನವರಿಗೆ ಗೊತ್ತಿರುವುದು ಕೇವಲ ಓಲೈಕೆ ರಾಜಕಾರಣ. ಒಂದು ಸಮುದಾಯವನ್ನು ಓಲೈಸಿಕೊಂಡು ಬಹುಸಂಖ್ಯಾತರನ್ನು ಕಡೆಗಣಿಸುವುದೇ ಆ ಪಕ್ಷದ ಸಂಸ್ಕøತಿ ಎಂದು ವಾಗ್ದಾಳಿ ನಡೆಸಿದರು.
ಲಕ್ಷಾಂತರ ಕಾರ್ಯಕರ್ತರಿಗೆ ಭಾಗವತ್ ಧ್ವಜ ಸ್ಪೂರ್ತಿಯಾಗಿದೆ. ನಮ್ಮ ಹಿರಿಯರು ಅದರಿಂದಲೇ ಜನರನ್ನು ಸಂಘಟಿಸಿ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಕೇಸರಿ ನಮಗೆ ಸ್ಪೂರ್ತಿ. ರಾಷ್ಟ್ರ ಧ್ವಜವನ್ನು ಬದಲಾಯಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಲಿಲ್ಲ. ಮುಂದೆ ಎಂದಾದರೂ ಒಂದು ದಿನ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ತಿರುಗೇಟು ಮಾಡಿದರು.
ಇಡೀ ದೇಶವೇ ತ್ರಿವರ್ಣ ಧ್ವಜಕ್ಕೆ ಗೌರವ ಕೊಡುತ್ತದೆ. ನಾವು ಕೂಡ ಅದನ್ನು ಗೌರವಿಸುತ್ತೇವೆ. ಎಲ್ಲಿ ಭಾಗವತ್ ಧ್ವಜವನ್ನು ಹಾರಿಸಬೇಕೋ ಹಾರಿಸುತ್ತೇವೆ. ಕಾಂಗ್ರೆಸಿಗರಿಂದ ನಾವು ರಾಷ್ಟ್ರ ಭಕ್ತಿಯನ್ನು ಕಲಿಯಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು.
ವಿಧಾನಪರಿಷತ್ ಪ್ರತಿಪ್ರಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ. ಅವರು ಹೆದರಿಸಿದರೆ ಇಲ್ಲಿ ಯಾರು ಹೆದರುವವರು ಇಲ್ಲ. ವೈಯಕ್ತಿಕವಾಗಿ ದಾಳಿ ಮಾಡಿದರೆ ನಮ್ಮದು ಕೂಡ ಅದೇ ಶೈಲಿಯಲ್ಲೇ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
