ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಸಿ.ಟಿ.ರವಿ ವ್ಯಂಗ್ಯ

Social Share

ಬೆಂಗಳೂರು,ಅ.6-ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ಒಪ್ಪಿದರೆ ಮಾತ್ರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಇಲ್ಲದಿದ್ದರೆ ನಾಟಕ ಶುರುವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ವರ್ಷ ರಾಜಕೀಯ ಅನುಭವ ಇರುವ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯರಿಗೆ ಸೋನಿಯಾಗಾಂಧಿ ಕೇಳಿ ಚುನಾವಣೆಗೆ ನಿಲ್ಲುವ ದುಸ್ಥಿತಿ ಬರಬಾರದಿತ್ತು. ಇದು ಕಾಂಗ್ರೆಸ್‍ನ ಹಣೆಬರಹ ಎಂದು ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಸ್ವ ಇಚ್ಚೆಯಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿಲ್ಲ. ಸೋನಿಯಾಗಾಂ ಅವರ ನಿರ್ದೇಶನದಂತೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಬಯಸಿದರೆ ಚುನಾವಣೆ ನಡೆಯಬಹುದು. ಇಲ್ಲದಿದ್ದರೆ ಏನುಬೇಕಾದರೂ ಆಗಬಹುದು.

ಖರ್ಗೆಯವರು ಮೊದಲು ಜೀತ ಪದ್ಧತಿ ಮನಸ್ಥಿತಿಯಿಂದ ಹೊರ ಬರಬೇಕು. ಸುದೀರ್ಘ ರಾಜಕೀಯ ಅನುಭವ ಇರುವ ಅವರ ವ್ಯಕ್ತಿತ್ವಕ್ಕೆ ಇದು ಒಪ್ಪುವಂತಹದ್ದಲ್ಲ. ಮುಳುಗುತ್ತಿರುವ ದೋಣಿಯ ನಾವಿಕನಂತಿರುವ ಪಕ್ಷಕ್ಕೆ ಯಾರೇ ನಾಯಕನಾದರೂ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದರು.

ಆರ್‍ಎಸ್‍ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಪ್ರಮುಖವಾಗಿ ಎರಡು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಜನಸಂಖ್ಯೆ ನಿಯಂತ್ರಣ ಹಾಗೂ ಜಾತಿಯತೆ ಹೋಗಬೇಕೆಂಬ ಅವರ ಸಲಹೆಯನ್ನು ಪಕ್ಷ ಸ್ವಾಗತಿಸುತ್ತದೆ ಎಂದರು.

ಜಾತಿಯತೆ ಮುಕ್ತ, ಅಸ್ಪೃಶ್ಯತೆ ಮುಕ್ತ ಹಿಂದೂ ಸಮಾಜ ನಿರ್ಮಾಣವಾಗಬೇಕೆಂಬುದು ಅವರ ಸದುದ್ದೇಶ. ಇದರಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು ಎಂದು ಹೇಳಿದ್ದಾರೆ. ಹಲವಾರು ವರ್ಷಗಳಿಂದ ಸಂಘ ಇದೇ ಸಂಸ್ಕಾರವನ್ನು ಮಾಡಿದೆ ಎಂದು ಹೇಳಿದರು.ದತ್ತಾತ್ರೇಯ ಹೊಸಬಾಳೆ ಅವರು ಅಸಮಾನತೆ, ನಿರುದ್ಯೋಗ ಕುರಿತು ಸುದುದ್ದೇಶದಿಂದ ಹೇಳಿದ್ದಾರೆ. ಅದನ್ನು ಪಕ್ಷ ಸ್ವೀಕಾರ ಮಾಡುತ್ತದೆ.

ಬಡತನ, ನಿರುದ್ಯೋಗ ಇದು ಭಾರತ ವಿಶ್ವ ಗುರುವಾಗಲು ಇರುವ ಅಡೆತಡೆ. ಇವುಗಳು ನಿವಾರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.ಕೆಲವರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಜಾತಿಯತೆ ಮಾಡುತ್ತಾರೆ. ವೋಟ್ ಬ್ಯಾಂಕ್‍ನಿಂದಲೇ ಅಸ್ಪೃಶ್ಯತೆ ಜೀವಂತವಾಗಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ದಲಿತರನ್ನು ಪರಿಗಣಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಹಿಂದೆ ಬಿಜೆಪಿಯನ್ನು ಭಟ್ರು-ಶೆಟ್ರು ಪಕ್ಷ ಎನ್ನುತ್ತಿದ್ದರು. ಒಕ್ಕಲಿಗರು ಅಲ್ಲಿಗೆ ಹೋಗಿ ಏನು ಮಾಡುತ್ತಾರೆ ಎಂಬ ಪ್ರಶ್ನೆಯನ್ನು ಮಾಡಿದ್ದರು.

ಅಧಿಕಾರ ಯಾರ್ಯಾರಿಗೆ ಸಿಕ್ಕಿ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. ನಾವು ಜಾತಿ ನೋಡಿ ಹುದ್ದೆ ಕೊಡುವುದಿಲ್ಲ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article