Tuesday, September 23, 2025
Homeರಾಜ್ಯಸೈಬರ್‌ ವಂಚನೆ : ಕ್ಷಿಪ್ರ ಕಾರ್ಯಾಚರಣೆ ನಡೆಸಿ 14 ಲಕ್ಷ ರೂ. ವಾಪಸ್‌‍

ಸೈಬರ್‌ ವಂಚನೆ : ಕ್ಷಿಪ್ರ ಕಾರ್ಯಾಚರಣೆ ನಡೆಸಿ 14 ಲಕ್ಷ ರೂ. ವಾಪಸ್‌‍

ಬೆಂಗಳೂರು,ಸೆ.22- ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಸೈಬರ್‌ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳೆಗೆ 14 ಲಕ್ಷ ರೂ. ಹಣವನ್ನು ಕೇವಲ ಒಂದು ವಾರದೊಳಗೆ ವಾಪಸ್‌‍ ಕೊಡಿಸುವಲ್ಲಿ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವೇಶ್ವರ ನಗರದ ಪ್ರೀತಿ (44) ಎಂಬುವವರಿಗೆ ಸೈಬರ್‌ ವಂಚಕರು ವಾಟ್‌್ಸಆಪ್‌ ಕರೆಮಾಡಿ ತಾವು ಮುಂಬೈ ಸೈಬರ್‌ ಕ್ರೈಂ ಎಂದು ಪರಿಚಯಿಸಿಕೊಂಡು ನಿಮ ಬ್ಯಾಂಕ್‌ ಖಾತೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂದು ಹೆದರಿಸಿದ್ದಾರೆ.

ನಿಮ ಹಣವನ್ನು ಆರ್‌ಬಿಐಗೆ ವೆರಿಫಿಕೇಷನ್‌ಗೆ ಕಳುಹಿಸಿ ಪುನಃ 45 ನಿಮಿಷದಲ್ಲಿ ನಿಮ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ, ಒಂದು ವೇಳೆ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡದಿದ್ದಲ್ಲಿ ನಿಮನ್ನು ಬಂಧಿಸಲಾಗುವುದೆಂದು ಬೆದರಿಸಿದ್ದಾರೆ. ತದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ 14 ಲಕ್ಷ ರೂ. ಹಣವನ್ನು ಯೆಸ್‌‍ ಬ್ಯಾಂಕ್‌ ಖಾತೆಗೆ ಕರೆ ಮಾಡಿದ ವ್ಯಕ್ತಿ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಕೆಲ ಗಂಟೆಗಳಾದರೂ ತಮ ಖಾತೆಗೆ ವಾಪಸ್‌‍ ಹಣ ವರ್ಗಾವಣೆಯಾಗದಿದ್ದಾಗ ಮೋಸ ಹೋಗಿರುವುದನ್ನು ಅರಿತ ಪ್ರೀತಿಯವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಇಎನ್‌ ಠಾಣೆ ಪೊಲೀಸರು, ಕೂಡಲೇ ಪ್ರೀತಿಯವರಿಂದಲೇ ರಾಷ್ಟ್ರೀಯ ಸೈಬರ್‌ ಸಹಾಯವಾಣಿ ನಂಬರ್‌1930ಗೆ ಕರೆ ಮಾಡಿಸಿ ದೂರು ದಾಖಲಿಸಿ, ಹಣ ವರ್ಗಾವಣೆಯಾದ ಆರೋಪಿತನ ಬ್ಯಾಂಕ್‌ ಖಾತೆಯಲ್ಲಿ ಹಣ ಫ್ರೀಜ್‌ ಮಾಡಿಸಲಾಗಿದೆ. ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಯ ಬ್ಯಾಂಕ್‌ ಖಾತೆಯಲ್ಲಿ ಫ್ರೀಜ್‌ ಆಗಿದ್ದ ಹಣವನ್ನು ವಾಪಸ್‌‍ ದೂರುದಾರರಾದ ಪ್ರೀತಿಯವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸುವ ಸಂಬಂಧ ಯೆಸ್‌‍ ಬ್ಯಾಂಕ್‌ನ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ 47 ನೇ ಎಸಿಜೆಎಂ ನ್ಯಾಯಾಲಯದಿಂದ ಆದೇಶವನ್ನು ಪಡೆದಿದ್ದಾರೆ.
ಅದರಂತೆ ಕೇವಲ ಒಂದು ವಾರದೊಳಗೆ ತ್ವರಿತಗತಿಯಲ್ಲಿ ಸಂಪೂರ್ಣ 14 ಲಕ್ಷ ರೂ. ಹಣವನ್ನು ದೂರುದಾರರಾದ ಪ್ರೀತಿ ಅವರಿಗೆ ವಾಪಸ್‌‍ ಕೊಡಿಸುವಲ್ಲಿ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪ ಪೊಲೀಸ್‌‍ ಆಯುಕ್ತ ಗಿರೀಶ್‌ ಅವರ ಮಾರ್ಗದರ್ಶನದಲ್ಲಿ , ಸಹಾಯಕ ಪೊಲೀಸ್‌‍ ಆಯುಕ್ತರಾದ ಉಮಾಮಣಿ ಅವರ ನೇತೃತ್ವದ ತನಿಖಾ ತಂಡವು ಯಶಸ್ವಿಯಾಗಿದೆ.

ಸಾರ್ವಜನಿಕರಿಗೆ ಸೂಚನೆ: ಸೈಬರ್‌ ವಂಚನೆಗೆ ಒಳಗಾಗಿ ಹಣವನ್ನು ಕಳೆದುಕೊಂಡವರು ಗಾಬರಿಗೊಳ್ಳದೆ ಸಮಯವನ್ನು ವ್ಯರ್ಥ ಮಾಡದೇ ಕೂಡಲೇ ರಾಷ್ಟ್ರೀಯ ಸೈಬರ್‌ ಸಹಾಯವಾಣಿ (1930) ಗೆ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಕೂಡಲೇ ಸಮೀಪದ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಲ್ಲಿ ತ್ವರಿತವಾಗಿ ಕ್ರಮಕೈಗೊಂಡು ತಮಗಾಗುವ ನಷ್ಟವನ್ನು ತಪ್ಪಿಸಬಹುದಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ಸಲಹೆ ಮಾಡಿದ್ದಾರೆ.

RELATED ARTICLES

Latest News