ತೌಕ್ತೆ ಚಂಡಮಾರುತ: ಕರ್ನಾಟಕದಲ್ಲಿ ಮೂರೂ ದಿನ ಭಾರಿ ಮಳೆ..!

ಬೆಂಗಳೂರು, ಮೇ 15-ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಪ್ರಬಲವಾಗುತ್ತಿದ್ದು, ಚಂಡ ಮಾರುತವಾಗಿ ಪರಿವರ್ತನೆಯಾಗುತ್ತಿದೆ. ಇದರ ಪರೋಕ್ಷ ಪರಿಣಾಮದಿಂದ ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ರಾಜ್ಯದ ಒಳನಾಡಿನ ಹಲವು ಭಾಗಗಳಲ್ಲಿ ಬೆಳಗ್ಗೆಯಿಂದಲೇ ತುಂತುರು ಮಳೆ ಆರಂಭವಾಗಿದೆ‌.

ಚಂಡಮಾರುತಕ್ಕೆ ತೌಕ್ತೆ ಎಂದು ನಾಮಕರಣ ಮಾಡಲಾಗಿದೆ. ಚಂಡ ಮಾರುತದ ಪರಿಣಾಮದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಈಗಾಗಲೇ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದ್ದು, ರಾಜ್ಯದ ಉಳಿದೆಡೆ ಹಗುರದಿಂದ ಸಾಧಾರಣಾ ಮಳೆಯಾಗುತ್ತಿದೆ.
ಚಂಡ ಮಾರುತವು ರಾಜ್ಯದ ಕರಾವಳಿಯನ್ನು ಸವರಿಕೊಂಡು ಹೋಗುವುದರಿಂದ ಕರಾವಳಿ ಭಾಗದಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ಈ ಸಂಜೆಗೆ ತಿಳಿಸಿದರು.

ಕೊಡಗು, ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ರಾಜ್ಯದ ಒಳನಾಡಿನಲ್ಲಿ ಹಗುರದಿಂದ ಸಾಧಾರಣಾ ಮಳೆಯಾಗುತ್ತಿದ್ದು, ಇನ್ನೆರಡು ದಿನ ಮುಂದುವರೆಯಲಿದೆ ಎಂದರು.

ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ‌. ಇದೇ ರೀತಿ ಮೇ 20ರವರೆಗೂ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರೆಯುವ ಲಕ್ಷಣಗಳಿವೆ.

ಅರಬ್ಬೀ ಸಮುದ್ರದಲ್ಲಿ ಕೇಂದ್ರೀಕೃತವಾಗಿರುವ ವಾಯುಭಾರ ಕುಸಿತ ಪ್ರಬಲವಾಗುತ್ತಿದ್ದು, ನಾಳೆ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ ಎಂದು ಅವರು ಹೇಳಿದರು. ವಾಯುಭಾರ ಕುಸಿತದ ಕೇಂದ್ರ ಸ್ಥಾನದಲ್ಲಿ ರಾಜ್ಯ ಇಲ್ಲದಿದ್ದರೂ ಅದರ ವ್ಯಾಪ್ತಿಗೆ ಒಳಪಡುವುದರಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಕೆಲವೆಡೆ ಮಳೆಯೂ ಆಗಬಹುದು.

ಚಂಡಮಾರುತವು ಈಶಾನ್ಯ ದಿಕ್ಕೆನೆಡೆಗೆ ಚಲಿಸಿ ನಂತರ ವಾಯುವ್ಯ ದಿಕ್ಕಿನ ಕಡೆಗೆ ಮುಂದುವರೆಯಲಿದೆ. ಅಂದರೆ, ಮೇ 18ರ ವೇಳೆಗೆ ಗೋವಾ, ಮಹಾರಾಷ್ಟ್ರದ ಮೂಲಕ‌ ಗುಜರಾತ್ ತಲುಪಲಿದೆ‌. ಅಲ್ಲೂ ಹೆಚ್ಚಿನ‌ ಮಳೆಯಾಗುವ ಸಂಭವವಿದೆ‌. ಮೇ 19ರ ವೇಳೆಗೆ ರಾಜಸ್ತಾನ ತಲುಪಿ, ನಂತರ ಕರಾಚಿ ಕಡೆಗೆ ಚಂಡ ಮಾರುತ ಮುಂದುವರೆಯಲಿದೆ ಎಂದು ಅವರು ವಿವರಿಸಿದರು.

ಈಗಾಗಲೇ ಪೂರ್ವ ಮುಂಗಾರು ಬೆಳೆಗಳ ಬಿತ್ತನೆಯನ್ನು ಕೆಲವು ರೈತರು ಮಾಡಿದ್ದಾರೆ‌. ಇನ್ನೂ ಕೆಲವು ರೈತರು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೇಸಿಗೆಯಲ್ಲಿ ನಿರ‌ಂತರವಾಗಿ ಮಳೆ ಬರುತ್ತಿರುವುದರಿಂದ ಮಾವು ಬೆಳೆಗಾರರಿಗೆ ಸ್ವಲ್ಪ ಮಟ್ಟಿನ ತೊಂದರೆಯಾದರೂ ಬಹುತೇಕ ಕೃಷಿಕರಿಗೆ ಅನುಕೂಲವಾಗಲಿದೆ. ಬೇಸಿಗೆಯ ಬಿಸಿಲಿನ ತಾಪವೂ ಕಡಿಮೆಯಾಗಲಿದೆ.