ಬಿಲ್ಡಪ್ ಕೊಡಲು ಬಂದ ಅಧಿಕಾರಿಗೆ ಛೀಮಾರಿ ಹಾಕಿದ ಸಚಿವ ಡಿ.ಕೆ.ಶಿವಕುಮಾರ್

DK-Shivakumar--01

ಬೆಂಗಳೂರು, ಜೂ.11- ಅಧಿಕಾರಿಯೊಬ್ಬರು ತಮ್ಮ ಹಿನ್ನೆಲೆ ಹಾಗೂ ಪ್ರಭಾವದ ಕುರಿತು ವಿವರಣೆ ನೀಡಲು ಪ್ರಯತ್ನಿಸಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಛೀಮಾರಿ ಹಾಕಿಸಿಕೊಂಡ ಪ್ರಸಂಗ ನಡೆದಿದೆ. ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಮೊದಲ ಹಂತದಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರ್ಕಾರಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಭಾಗವಹಿಸಿದ್ದರು. ಸಭೆಯ ಆರಂಭದಲ್ಲಿ ಒಬ್ಬೊಬ್ಬರಾಗಿ ಪರಿಚಯ ಮಾಡಿಕೊಳ್ಳುವಂತೆ ಸಚಿವ ಡಿ.ಕೆ.ಶಿವಕುಮಾರ್ ಸೂಚಿಸಿದರು. ಈ ವೇಳೆ ಅಧಿಕಾರಿಯೊಬ್ಬರು ತಮ್ಮ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳ ಹೆಸರನ್ನು ಹೇಳಲಾರಂಭಿಸಿದರು. ಇದರಿಂದ ಸಿಟ್ಟಾದ ಸಚಿವರು, ಕೇಳಿದ್ದಕ್ಕಷ್ಟೇ ಉತ್ತರ ಕೊಡಿ. ನಿಮ್ಮ ಪೂರ್ವ ಇತಿಹಾಸಗಳೆಲ್ಲಾ ಈಗ ಬೇಡ ಎಂದು ಗದರಿದ್ದಾರೆ. ಇದರಿಂದ ಒಂದು ಕ್ಷಣ ಸಭೆಯಲ್ಲಿದ್ದ ಅಧಿಕಾರಿಗಳು ತಳಮಳಗೊಂಡು ಗಪ್‍ಚಿಪ್ ಆಗಿದ್ದಾರೆ. ಅಧಿಕ ಪ್ರಸಂಗದ ಮಾತನಾಡಲು ಹೋದ ಅಧಿಕಾರಿ ಪೆಚ್ಚುಮೋರೆ ಹಾಕಿಕೊಂಡು ಸುಮ್ಮನೆ ಕುಳಿತರು ಎಂದು ತಿಳಿದು ಬಂದಿದೆ.

Sri Raghav

Admin