ನವದೆಹಲಿ,ಮೇ25- ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕಸರತ್ತು ಮುಂದುವರೆದಿದ್ದು, ಮೊದಲ ಹಂತದಲ್ಲಿ 20ಕ್ಕೂ ಹೆಚ್ಚು ಮಂದಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಸಂಪುಟದಲ್ಲಿ ಖಾಲಿ ಇರುವ 24 ಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯ ಲ್ಲಿಂದು ಪಕ್ಷದ ಹೈಕಮಾಂಡ್ ಜೊತೆ ಸಭೆಗಳನ್ನು ನಡೆಸಿದ್ದಾರೆ.
ನಿನ್ನೆ ದೆಹಲಿ ತಲುಪಿದ ಇಬ್ಬರು ನಾಯಕರು ರಾತ್ರಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆ ಮೊದಲ ಸುತ್ತಿನ ಚರ್ಚೆ ನಡೆಸಿದ್ದಾರೆ. ಇಂದು ಮತ್ತೆ ಒಂದು ಸುತ್ತಿನ ಸಭೆ ನಡೆಸಲಿದ್ದು, ಆರಂಭದಲ್ಲಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರುಗಳು ಪಾಲ್ಗೊಳ್ಳಲಿದ್ದಾರೆ.ಬಳಿಕ ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಅಂತಿಮ ಚರ್ಚೆ ನಡೆಯಲಿದ್ದು, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಗಮನಕ್ಕೆ ತಂದು ಸಚಿವರ ಆಯ್ಕೆಯನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ.
ಈ ಬಾರಿ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಮೊದಲ ಹಂತದ ಸಂಪುಟದಲ್ಲಿ ಹಿರಿಯರಿಗೆ, ಅನುಭವಿಗಳಿಗೆ ಆದ್ಯತೆ ನೀಡಲಾಗಿದೆ. 2ನೇ ಹಂತದಲ್ಲಿ ಜಾತಿ ಮತ್ತು ಪ್ರಾದೇಶಿಕವಾರು ಪ್ರಾತಿನಿಧ್ಯಗಳೊಂದಿಗೆ ಯುವಕರಿಗೆ ಹೆಚ್ಚು ಅವಕಾಶಗಳನ್ನು ನೀಡಲು ಚರ್ಚೆಗಳು ನಡೆದಿವೆ.
ಕುಖ್ಯಾತ ಗ್ಯಾಂಗ್‍ಸ್ಟರ್ ಬಿಷ್ಣೋಯ್ ದೆಹಲಿಗೆ ಸ್ಥಳಾಂತರ
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುವ ದೃಷ್ಟಿಯಿಂದ ಸಂಪುಟ ವಿಸ್ತರಣೆಯ ಚರ್ಚೆಗಳು ನಡೆಯುತ್ತಿವೆ. ಆದರೆ ಹಿರಿಯರಾದ ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕರು ತಮಗೂ ಅವಕಾಶ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಸಂಭವನೀಯ ಸಚಿವರ ಪಟ್ಟಿ ತಯಾರಿಸಿರುವ ಸಿದ್ದರಾಮಯ್ಯ ತಮ್ಮ ಬಣದ 19 ಜನರ ಹೆಸರನ್ನು ಮುಂದಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ 16ಕ್ಕೂ ಹೆಚ್ಚು ಮಂದಿ ಹೆಸರನ್ನು ಸೇರಿಸಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈದಾರಾಬಾದ್ ಕರ್ನಾಟಕ ಭಾಗಕ್ಕೆ ಐದು ಸ್ಥಾನಗಳನ್ನು ನೀಡಬೇಕೆಂದು ಸೂಚಿಸಿದ್ದು, ಅದಕ್ಕೆ ಈಗಾಗಲೇ ಹೆಸರುಗಳನ್ನು ಅಖೈರು ಮಾಡಲಾಗಿದೆ ಎನ್ನಲಾಗಿದೆ.
ದೆಹಲಿಯಲ್ಲಿಂದು ತಮ್ಮ ಆಪ್ತರ ಜೊತೆ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದೇ ಸಚಿವರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.2ರಿಂದ 3 ಸ್ಥಾನಗಳನ್ನು ಮಾತ್ರ ಬಾಕಿ ಉಳಿಸಿಕೊಂಡು ಉಳಿದ 20ರಿಂದ 22 ಸ್ಥಾನಗಳಿಗೆ ಸಚಿವರ ನೇಮಕಾತಿಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೊತೆಯಲ್ಲಿ ಖಾತೆ ಹಂಚಿಕೆ ಕುರಿತು ಚರ್ಚೆಗಳಾಗಿದ್ದು, ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಪ್ರಭಾವಿ ಖಾತೆಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದಿಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಚರ್ಚೆಗಳು ಮುಂದುವರೆದಿದೆ.
ಸಂಭವನೀಯ ಸಚಿವರ ಪಟ್ಟಿಯಲ್ಲಿ ಈಗಾಗಲೇ 20 ಮಂದಿಯ ಹೆಸರು ಅಂತಿಮಗೊಂಡಿದ್ದು, ಉಳಿದಂತೆ ಮಾಂಕಾಳ ಸುಬ್ಬ ವೈದ್ಯ, ಈಶ್ವರ್ ಖಂಡ್ರೆ, ಬಸವನಗೌಡ ತುರುವಿಹಾಳ್, ಬಸವರಾಜ ರಾಯರೆಡ್ಡಿ, ಎಸ್.ರವಿ, ರಹೀಂ ಖಾನ್, ಪ್ರಸಾದ್ ಅಬ್ಬಯ್ಯ, ಗಣೇಶ್ ಹುಕ್ಕೇರಿ, ಯಶವಂತರಾಯ ಗೌಡ ಪಾಟೀಲ್, ಎಚ್.ಕೆ.ಪಾಟೀಲ್, ತನ್ವೀರ್ ಸೇಠ್, ಎಚ್.ಸಿ.ಮಹದೇವಪ್ಪ, ಪ್ರಕಾಶ್ ರಾಥೋಡ್, ಲಕ್ಷ್ಮಣ್ ಸವದಿ ಮತ್ತಿತರರು ಲಾಬಿ ನಡೆಸುತ್ತಿದ್ದಾರೆ.
#DKShivakumar, #Siddaramaiah, #Delhi, #discuss, #KarnatakaCabinet,