ಬೆಂಗಳೂರು,ಮಾ.8- ರಾಜ್ಯದಲ್ಲಿ ಹೈನುಗಾರಿಕೆ ಕುಸಿಯಲು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳೇ ಕಾರಣ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾರ್ಚ್‍ನಲ್ಲಿ ಪ್ರತಿ ದಿನ 99 ಲಕ್ಷ ಲೀಟರುಗಳಷ್ಟು ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರುಗಳಷ್ಟು ಹಾಲನ್ನು ಮಾತ್ರ ಕೆಎಂಎಫ್ ಸಂಗ್ರಹಿಸುತ್ತಿದೆ. ಇದೂ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಸ್ತುತ ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ.
ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ ಎಂದು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರಗಳ ಹಾದಿ ತಪ್ಪಿದ ನೀತಿಗಳಿಂದ ಹೈನುಗಾರಿಕೆ ಸಂಕಷ್ಟಕ್ಕೀಡಾಗಿದೆ.
ಮೋದಿ ರೋಡ್ ಶೋ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗ ಬದಲಾವಣೆ
ಗುಜರಾತ್ ಮೂಲದ ರಾಜಕಾರಣಿಗಳು ಮತ್ತು ವ್ಯಾಪಾರಿಗಳ ಕಣ್ಣು ನಮ್ಮ ಕೆಎಂಎಫ್ ಮೇಲೆ ಬಿದ್ದಾಗಿನಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ. ಇವರಿಂದಾಗಿ ರಾಜ್ಯದ ರೈತರಿಗೂ ಸಂಕಷ್ಟ ಬಂದೊದಗಿದೆ.
ಕೊಳ್ಳುವ ಗ್ರಾಹಕರೂ ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ. ನಂದಿನಿ ಮಳಿಗೆಗಳಲ್ಲಿ ಕಲಬೆರಕೆ ತುಪ್ಪವೂ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ದೂರುತ್ತಿದ್ದಾರೆ. ಕೈ ಸುಡುವಷ್ಟು ಮಟ್ಟಿಗೆ ಬೆಲೆಗಳು ಏರಿಕೆಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರವೆ ನನಗೆ ಕೊಟ್ಟಿರುವ ಮಾಹಿತಿ ಪ್ರಕಾರ 2019 ರಲ್ಲಿ 1.29 ಕೋಟಿ ಹಸು ಎಮ್ಮೆ, ಎತ್ತು, ಕೋಣಗಳಿದ್ದವು. ಅವು 2022 ರ ಡಿಸೆಂಬರ್ ವೇಳೆಗೆ 1.15 ಕೋಟಿ ಇಳಿಕೆಯಾಗಿವೆ. ಈ 14 ಲಕ್ಷ ಜಾನುವಾರುಗಳು ಎಲ್ಲಿಗೆ ಹೋದವು? ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಹೆಚ್ಚಾಗುವುದರ ಬದಲಿಗೆ ಕಡಿಮೆಯಾಗುವುದಕ್ಕೆ ಕಾರಣಗಳೇನು? ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಬಹುತೇಕ ಗೋಶಾಲೆಗಳಲ್ಲಿ ಗಂಡು ಕರುಗಳ ಪ್ರಮಾಣ ಶೇ.10 ಕ್ಕಿಂತ ಕಡಿಮೆ ಇದೆ.
ನಿಸರ್ಗ ತತ್ವದ ಪ್ರಕಾರ ಶೇ.50 ರಷ್ಟು ಗಂಡು ಕರುಗಳು ಹುಟ್ಟುತ್ತವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳು ಎಲ್ಲಿಗೆ ಹೋಗುತ್ತಿವೆ? ಸಬರ್ವಾಲ್‍ಗಳು, ಬಿಂದ್ರಾಗಳು, ಜೈನ್‍ಗಳು, ಶರ್ಮಾ ಮುಂತಾದವರು ಮಾಡುತ್ತಿರುವ ದನದ ಮಾಂಸ ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿದೆ. ಹಾಗಿದ್ದರೆ ಯಾರ ಅಭಯದಿಂದ ಇವರೆಲ್ಲ ಮಾಂಶ ರಫ್ತು ಮಾಡುತ್ತಿದ್ದಾರೆ? ಇದಕ್ಕೆಲ್ಲ ಬಿಜೆಪಿ ಸರ್ಕಾರಗಳು ಉತ್ತರ ಹೇಳಬೇಕಿದೆ ಎಂದು ಒತ್ತಾಯಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಸುಮಾರು 25 ಲಕ್ಷ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಹಾಲನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ರೈತರೆ ಹಸುಗಳನ್ನು ಸಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಹೈನುಗಾರಿಕೆಯ ಚೈತನ್ಯವನ್ನು ನಾಶ ಮಾಡಲು ಮನುವಾದಿ ಶಕ್ತಿಗಳು ಹಾಗೂ ಕಾಪೆರ್ರೇಟ್ ಶಕ್ತಿಗಳು ಒಂದಾಗಿ ಶ್ರಮಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ನಮ್ಮ ಸರ್ಕಾರ ಇದ್ದಾಗ 2013 ರಿಂದ 2018ರ ಅವಯಲ್ಲಿ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಲೀಟರಿಗೆ 5 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಇದರಿಂದ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ 28 ಲಕ್ಷ ಲೀಟರು ಏರಿಕೆಯಾಗಿತ್ತು. ಈಗ 2017 ಕ್ಕಿಂತಲೂ ಪ್ರತಿದಿನ 2 ಲಕ್ಷ ಲೀಟರುಗಳಷ್ಟು ಕಡಿಮೆ ಹಾಲು ಸಂಗ್ರಹವಾಗುತ್ತಿದೆ.
ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ : ವಿದ್ಯಾರ್ಥಿಗಳಿಗೆ ಆಲ್‍ದಿ ಬೆಸ್ಟ್
ನಮ್ಮ ಸರ್ಕಾರ ಉತ್ಪಾದಕರಿಗೆ 1356 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡಲಾಗಿತ್ತು. 2020 -21 ರಲ್ಲಿ ಬಿಜೆಪಿ ಸರ್ಕಾರ 1186 ಕೋಟಿ ಖರ್ಚು ಮಾಡಿದ್ದರೆ, 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಮಾತ್ರ ಬಜೆಟ್‍ನಲ್ಲಿ ಒದಗಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಜಾನುವಾರುಗಳಿಗೆ ನೀಡುವ ಹಿಂಡಿ, ಬೂಸಾ ಮುಂತಾದ ಪಶು ಆಹಾರದ ಬೆಲೆಗಳು 3 ಪಟ್ಟು ಹೆಚ್ಚಾಗಿವೆ. 2017-18ಕ್ಕೂ ಮೊದಲು 49 ಕೆಜಿ ಬೂಸಾದ ಬೆಲೆ 450 ರೂ ಇತ್ತು, ಈಗ 1300 ರಿಂದ 1350 ರೂಗಳಿಗೆ ಏರಿಕೆಯಾಗಿದೆ. 30 ಕೆಜಿ ಹಿಂಡಿಯ ಬೆಲೆ 400 ರೂ ಇತ್ತು, ಈಗ 1500 ಕ್ಕೂ ಹೆಚ್ಚಾಗಿದೆ. ಹಾಲಿನ ದರಗಳು ಮಾತ್ರ ಹೆಚ್ಚಾಗಿಲ್ಲ. ಇದರಿಂದಾಗಿ ನಮ್ಮ ರೈತರು ಜಾನುವಾರುಗಳನ್ನು ಸಾಕಣೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಪೆಟ್ರೋಲ್, ಡೀಸೆಲ್ ದರ, ಹೆದ್ದಾರಿಗಳ ಟೋಲ್ ಏರಿಕೆಯಿಂದ ಹಿಂಡಿ, ಬೂಸಾ ಬೆಲೆ ಏರಿಕೆಯಾಗಿದೆ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ. ಇದು ಸಾಲದು ಎಂಬಂತೆ ಹಿಂಡಿಗೆ ಶೇ.5 ರಷ್ಟು ಜಿಎಸ್‍ಟಿಯನ್ನು ವಿಸಲಾಗುತ್ತಿದೆ. ಜೊತೆ ಬಿಜೆಪಿ ಸರ್ಕಾರಿ ಕಾವಲು ಜಮೀನುಗಳನ್ನು ಉಳ್ಳವರಿಗೆ, ಆರ್‍ಎಸ್‍ಎಸ್‍ನವರಿಗೆ ಡಿ-ನೋಟಿಫೈ ಮಾಡಿಕೊಟ್ಟಿದೆ.
ಜೊತೆಗೆ ಚರ್ಮಗಂಟು ಕಾಯಿಲೆ ಕೂಡ ಲಕ್ಷಾಂತರ ಜಾನುವಾರುಗಳನ್ನು ರೋಗಗ್ರಸ್ತವಾಗುವಂತೆ ಮಾಡಿದೆ. ಸುಮಾರು 32000 ಜಾನುವಾರುಗಳು ಈ ರೋಗದಿಂದ ಮರಣ ಹೊಂದಿವೆ. ಇವು ಪಶುಪಾಲನೆ ಕುಸಿಯಲು ಕಾರಣ ಎಂದು ಆರೋಪಿಸಿದ್ದಾರೆ.
ಬಿಜೆಪಿ ಟಿಕೆಟ್ ವಿಚಾರ : ಹಳಬರಿಗೆ ಕೋಕ್, RSS ನಿಷ್ಠರಿಗೆ ಲಕ್
ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಂಸಾರಗಳನ್ನು ನಡೆಸಲು ಹೈನುಗಾರಿಕೆ ಪ್ರಮುಖ ಸಾಧನವಾಗಿದೆ. ಸರ್ಕಾರ ಕೂಡಲೇ ಎಲ್ಲಾ ಹುಲ್ಲುಗಾವಲುಗಳನ್ನು ರಕ್ಷಣೆ ಮಾಡಬೇಕು, ಹಿಂಡಿ-ಬೂಸಾ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಹೈನುಗಾರಿಕೆ ಪ್ರೋತ್ಸಾಹಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Dairy, BJP, government, bad, policies, Siddaramaiah,