ಬೆಂಗಳೂರು,ಜು.16- ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಭೂ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ನದಿಗಳು ಉಕ್ಕಿ ಹರಿದು, ಜಲಾಶಯಗಳು ಭರ್ತಿಯಾಗಿ ಒಳಹರಿವು ಹೆಚ್ಚಾಗಿ ನದಿಪಾತ್ರದ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಹಾಸನದಿಂದ ಸಕಲೇಶಪುರ ಮಾರ್ಗದಲ್ಲಿ ದೋಣಿಗಲ್ ಸಮೀಪ ಭೂ ಕುಸಿತ ಉಂಟಾಗಿ ಶಿರಾಡಿ ಘಾಟ್ ಸಂಪರ್ಕ ಬಂದ್ ಮಾಡಲಾಗಿದೆ.
ಕಳೆದ 10 ದಿನಗಳಿಂದ ಮಲೆನಾಡು ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ನದಿ, ತೊರೆ, ಹಳ್ಳಕೊಳ್ಳಗಳೆಲ್ಲ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂ ಕುಸಿತವಾಗಿದ್ದು ಶಿರಾಡಿ ಘಾಟ್‍ನ ಸಂಪರ್ಕ ಕಡಿತ ಮಾಡಲಾಗಿದೆ.
ದುರಸ್ತಿ ಕಾರ್ಯ ನಡೆದರೂ ಅತಿಯಾದ ಮಳೆಯಿಂದ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿ ಭಾರೀ ವಾಹನ ಸಂಚಾರವನ್ನು ನಿರ್ಬಂಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ವಿರಾಜಪೇಟೆಯಲ್ಲಿರುವ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬೆಟ್ಟದ ಸಮೀಪ ವಾಸ ಮಾಡುತ್ತಿರುವ ಜನರನ್ನು ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಅಯ್ಯಪ್ಪಬೆಟ್ಟ ಹಾಗೂ ಮೆಲತಿರಕೆ ಬೆಟ್ಟದಲ್ಲಿ ವಾಸ ಮಾಡುತ್ತಿದ್ದ 80 ಕುಟುಂಬಗಳ 221 ಜನರನ್ನು ವಿರಾಜಪೇಟೆಯ ಸಂತ ಹನಮ್ಮ ಶಾಲೆಯ ಕಾಳಜಿ ಕೇಂದ್ರಕೆ ಸ್ಥಳಾಂತರ ಮಾಡಲಾಗಿದೆ. 2018ರಲ್ಲಿ ಜಲ ಪ್ರಳಯವಾದಾಗ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆಗ ಕೂಡ ಅಲ್ಲಿಂದ ಜನರನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿತ್ತು. ಸದ್ಯ ಈ ಪ್ರದೇಶದಲ್ಲಿ ಮಳೆ ಹೆಚ್ಚಾದ ಕಾರಣ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗುಡ್ಡ ಕುಸಿತವಾದರೆ ಮಣ್ಣು, ಮನೆಗಳ ಮೇಲೆ ಬೀಳುವ ಆತಂಕ ಎದುರಾಗಿದ್ದು, ಜನರನ್ನು ಬೇರಡೆ ಸ್ಥಳಾಂತರ ಮಾಡಲಾಗಿದೆ.
ಬೀದರ್, ರಾಯಚೂರು, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಕೃಷ್ಣಾನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಕೃಷ್ಣನದಿ ಪಾತ್ರದಲ್ಲಿರುವ ಹೊಲಗದ್ದೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯಬಿದ್ದರೆ ಕಾಳಜಿ ಕೇಂದ್ರಗಳನ್ನು ತೆರೆದು ಅಲ್ಲಿಗೆ ಸ್ಥಳಾಂತರ ಮಾಡುವ ಕ್ರಮಕ್ಕೆ ಮುಂದಾಗಿದ್ದಾರೆ.
ಮಳೆ ಇನ್ನು ನಾಲ್ಕೈದು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇರುವುದರಿಂದ ಸಂಭಾವ್ಯ ಅನಾಹುತಗಳನ್ನು ತಡೆಗಟ್ಟಲು ಸನ್ನದ್ದರಾಗಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಳಿಗೆ ಸೂಚನೆ ನೀಡಿದ್ದಾರೆ.