ವಿಶ್ವ ವಿಖ್ಯಾತ ದಸರಾ ಐತಿಹಾಸಿಕ ಹಿನ್ನೆಲೆ ಗೊತ್ತೇ..?

Dasarqa-01

ಹಬ್ಬ ಸಾಮೂಹಿಕವಾಗಿ ಆಚರಿಸುವ ಒಂದು ಸಂತೋಷದ ಆಚರಣೆ. ಹಿಂದೂಗಳು ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ದೀಪಾವಳಿ, ಗಣೇಶ ಚತುರ್ಥಿ, ನವರಾತ್ರಿ ಅಥವಾ ದಸರಾದಂತಹ ಹಬ್ಬಗಳನ್ನು ಆಚರಿಸುತ್ತಾರೆ. ಅಶ್ವೀಜ ಮಾಸದ ಶುದ್ಧ ಪಾಡ್ಯಮಿಯಿಂದ ದಶಮಿವರೆಗಿನ ಹತ್ತು ದಿನಗಳು ನಡೆಯುವ ಹಬ್ಬವೇ ದಸರಾ. ದಶಹರ, ದಶರಾತ್ರಿ, ನವರಾತ್ರಿ ಎಂದೂ ಈ ಹಬ್ಬವನ್ನು ಕರೆಯುವುದುಂಟು. ಮೊದಲೂ ಒಂಬತ್ತು ದಿನಗಳನ್ನು ನವರಾತ್ರಿಯೆಂದೂ, ಹತ್ತನೆಯ ದಿನವನ್ನೂ ವಿಜಯ ದಶಮಿಯೆಂದೂ ಕರೆಯುವುದು ವಾಡಿಕೆ.  ಈ ಹಬ್ಬದ ಸಾಲಿನ ಕೊನೆಯಲ್ಲಿ ಬರುವ ಮಹಾನವಮಿ ಮತ್ತು ವಿಜಯದಶಮಿ ಬಹುಮುಖ್ಯವಾದ ದಿನಗಳಾಗಿವೆ. ದಾನವರು ದೇವತೆಗಳ ನಡುವೆ ನಡೆದ ಯುದ್ದದಲ್ಲಿ ದೇವತೆಗಳಿಗೆ ಉಂಟಾದ ವಿಜಯವನ್ನಾಚರಿಸುವ ಪದ್ಧತಿ ಬೆಳೆದು ಬಂದುದಾಗಿ ಪುರಾಣಗಳಿಂದ ತಿಳಿದುಬರುತ್ತದೆ.

# ಘೋರ ಸಂಗ್ರಾಮ:
ಮಹಿಷಾಸುರನೆಂಬ ರಾಕ್ಷಸನ ಕಾಟ ತಾಳಲಾರದೆ ತ್ರಿಮೂರ್ತಿಗಳು ಕಾತ್ಯಾಯಿಣಿಗೆ ಶಕ್ತಿ ನೀಡಿದ್ದರಿಂದ ಅಸುರರನ್ನೆಲ್ಲ ಹತ್ಯೆ ಮಾಡಿದಳು. ಈ ಭೀಕರ ಸಂಹಾರದಿಂದ ಮಹಿಷಾಸುರನಿಗೆ ಕೋಪ ಇಮ್ಮಡಿಸಿತು. ಅವನು ಆಕೆಯ ಮೇಲೆರಗಿ ಘೋರ ಯುದ್ಧ ಮಾಡಿದಾಗ ದೇವಿ (ಕಾತ್ಯಾಯಿನಿ)ಯು ಕೈಯಲ್ಲಿನ ತ್ರಿಶೂಲದಿಂದ ಮಹಿಷಾಸುರನ ಕೊರಳು ಕತ್ತರಿಸಿದಳು. ಈತನಕ ಭಯದಿಂದ ಅಡಗಿ ಕುಳಿತಿದ್ದ ಮಹಿಷಾಸುರನ ಮಂತ್ರಿಗಳಾದ ಚಂಡಮುಂಡರು ಮೇಲೆದ್ದು ಯುದ್ದಕ್ಕೆ ನಿಂತರು. ಭಯಂಕರ ಮುಖ ಮುದ್ರೆಯ ಆ ಮಹಾಕಾಳಿ ಒಂದು ಕೈಯಲ್ಲಿ ಮಹಾ ಖಡ್ಗ ಇನ್ನೊಂದು ಕೈಯಲ್ಲಿ ತಲೆ ಬುರುಡೆ ಹಿಡಿದು ಮೈತುಂಬ ನೆತ್ತರ ಮೆತ್ತಿದ ಸ್ಥಿತಿಯಲ್ಲಿ ಹೊರಬಿದ್ದಳು.  ಅವರ ರುಂಡಗಳನ್ನು ಕತ್ತರಿಸಿ ಹಾವಿನಿಂದ ಪೋಣಿಸಿ ಮಾಲೆಯನ್ನಾಗಿಸಿಕೊಂಡು ಕೊರಳಿಗೆ ಧರಿಸಿಕೊಂಡಳು. ಆದರೆ ಅತ್ಯಂತ ಬಲಿಷ್ಟನಾದ ರಕ್ತಬೀಜನಿಗೆ ಅವಳು ಬಿಟ್ಟ ಬಾಣದಿಂದ ಹರಿದ ಹನಿ ಹನಿ ರಕ್ತದಿಂದ ಒಬ್ಬೊಬ್ಬ ಪರಾಕ್ರಮಿಗಳು ಜನಿಸಿದರು.  ಅವರೆಲ್ಲರನ್ನೂ ಕೊಂದ ದೇವಿಯು, ಅವನ ರಕ್ತ ಭೂಮಿಯ ಮೇಲೆ ಬೀಳದಂತೆ ದೊಡ್ಡದಾಗಿ ನಾಲಿಗೆ ಚಾಚಿದಳು. ರಕ್ತಬೀಜನ ಬಲ ತಗ್ಗಿ ಕಾಳಿಯ ಕತ್ತಿಯಿಂದ ಹತನಾದನು.

# ಅನ್ವರ್ಥ ನಾಮ:
ಹೀಗೆ ಚಂಡಮುಂಡರನ್ನು ಸಂಹರಿಸಿದ ದೇವಿಗೆ ಚಾಮುಂಡೇಶ್ವರಿ ಎಂದು ಮೈಸೂರಿನ ಅಸುರ ಮಹಿಷನನ್ನು ಮರ್ದಿಸಿದ್ದರಿಂದ ಮಹಿಷಾಸುರ ಮರ್ದಿನಿ ಯೆಂದು ಹೆಸರಾಯಿತು. ದೇವಿ ಬೆಟ್ಟದ ಮೇಲೆ ನೆಲೆಸಿದ್ದರಿಂದ ಅದು ಚಾಮುಂಡಿ ಬೆಟ್ಟವೆಂದು ಪ್ರಖ್ಯಾತವಾಯಿತು. ದೇವಿಗೂ ಮಹಿಷಾಸುರನಿಗೂ ಒಂಬತ್ತು ದಿನ ನಡೆದ ಈ ಯುದ್ದದ ಸ್ಮರಣಾರ್ಥದ ಹಬ್ಬವೇ ನವರಾತ್ರಿ. ಹತ್ತನೇ ದಿನಕ್ಕೆ ಮಹಿಷಾಸುರನ ವಧೆಯಾಗಿದ್ದರಿಂದ ಈ ದಿನವು ವಿಜಯದಶಮಿಯಾಯಿತು.

# ಶಕ್ತಿಪೂಜೆ:
ಶಕ್ತಿಪೂಜೆ ಹಿಂದಿನಿಂದಲೂ ಪ್ರಚಲಿತವಿದೆ. ವೇದದಲ್ಲಿನ ದೇವಿಸೂಕ್ತ, ಶ್ರೀ ಸೂಕ್ತ ಮತ್ತು ದುರ್ಗಾಸೂಕ್ತಗಳು ವೇದಗಳ ಕಾಲದ ಶಕ್ತಿಪೂಜಾ ಪ್ರಾಮಾಣಕ್ಕೆ ಆಧಾರಗಳಾಗಿವೆ. ದೇವಿಯೂ ದುಷ್ಟಸಂಹಾರಕಳೂ, ಶಿಷ್ಟರಕ್ಷಕಳೂ ಆಗಿದ್ದಾಳೆ. ಆದ್ದರಿಂದಲೇ ದೇವಿಯನ್ನು ಆದಿಶಕ್ತಿ, ಮಹಾಮಾಯೆ, ಜಗನ್ಮಾತೆ ಎಂದು ಅತ್ಯಂತ ಪ್ರಾಚೀನಕಾಲದಿಂದಲೂ ಆರಾಧನೆಗೈಯುತ್ತ ಬರಲಾಗಿದೆ. ಆದಿಶಕ್ತಿಯೇ ಸರಸ್ವತಿಯೆನಿಸಿ ಬ್ರಹ್ಮಶಕ್ತಿಯಾಗಿದ್ದಾಳೆ. ಲಕ್ಷ್ಮೀಯೆನಿಸಿ ವಿಷ್ಣುಶಕ್ತಿಯಾಗಿದ್ದಾಳೆ. ಪಾರ್ವತಿಯೆನಿಸಿ ಶಿವಶಕ್ತಿಯಾಗಿದ್ದಾಳೆ. ಹೀಗೆ ನಾನಾ ರೂಪ ಒಳ್ಳೆಯ ಗುಣಗಳನ್ನು ತಳೆದು ಭಕ್ತ ಜನರಿಗೆ ಯಾವಾಗಲೂ ಪ್ರಸನ್ನಳಾಗಿದ್ದಾಳೆ. ಆದ್ದರಿಂದಲೇ ದಸರಾ ದಿನಗಳಲ್ಲಿ ಶಕ್ತಿಸ್ವರೂಪಿಣಿಯರಾದ ಲಕ್ಷ್ಮೀ, ಸರಸ್ವತಿ, ಕಾಳಿಯರನ್ನು ಹಿಂದೂಗಳು ಉಪಾಸನೆ ಮಾಡುತ್ತಾರೆ. ಈ ದೇವತೆಗಳ ಕರುಣೆಯಿಲ್ಲದೆ ಯಾವುದೂ ಸಾಧ್ಯವಿಲ್ಲ. ಮಳೆ, ಬೆಳೆ, ಧನ, ಸಂತಾನ, ಶ್ರೇಯಸ್ಸು ಮೊದಲಾದ ಪ್ರಾಪ್ತಿ ಇವರ ಕೃಪೆಯಿಂದಲೇ ಎಂಬ ಬಲವಾದ ನಂಬಿಕೆ ಪ್ರಾಚೀನಕಾಲದಿಂದಲೂ ಉಳಿದು ಬಂದಿದೆ.