ಸರಳ ದಸರಾಗೆ ತಯಾರಿ, ಆನೆಗಳಿಗೂ ಕೋವಿಡ್ ನೆಗಟಿವ್ ವರದಿ ಕಡ್ಡಾಯ..!

ಬೆಂಗಳೂರು,ಆ.16- ಮಹಾಮಾರಿ ಕೊರೋನಾದಿಂದಾಗಿ ಈ ಬಾರಿಯೂ ನಾಡ ಹಬ್ಬ-ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡುವ ಸಾಧ್ಯತೆ ಇದ್ದು, ಜಂಬೂ ಸವಾರಿಯಲ್ಲಿ ಭಾಗವಹಿಸಲು ಯಾವ ಆನೆಗಳಿಗೆ ಅನುಮತಿ ನೀಡಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಈ ಬಾರಿ ಕೇವಲ ಮಾವುತರು, ಕಾವಡಿಗಳು, ದಸರಾ ಸಂಘಟನಾ ಸಮಿತಿ ಸದಸ್ಯರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಮಾತ್ರವಲ್ಲದೆ ಆನೆಗಳಿಗೂ ಕೋವಿಡ್ ನೆಗಟಿವ್ ವರದಿ ಕಡ್ಡಾಯ ಮಾಡಲಾಗಿದೆ.

ಕಳೆದ ವರ್ಷ, ಆನೆಗಳನ್ನು ಗಜಪಯಣದ ನಂತರ ಮೈಸೂರಿಗೆ ಕರೆತಂದಾಗ ಕೋವಿಡ್ ಪರೀಕ್ಷಿಸಲಾಯಿತು ಮತ್ತು 13-14 ಆನೆಗಳ ಬದಲಾಗಿ ಕೇವಲ ಐದು ಅಭಿಮನ್ಯು(ಚಿನ್ನದ ಅಂಬಾರಿ ಹೊತ್ತಿದ್ದ), ವಿಕ್ರಮ್, ಕಾವೇರಿ ಮತ್ತು ವಿಜಯ ಸೇರಿದಂತೆ ಮೂರು ಗಂಡು ಮತ್ತು ಎರಡು ಹೆಣ್ಣು ಆನೆಗಳನ್ನು ಮಾತ್ರ ಕರೆ ತರಲಾಗಿತ್ತು.

ಈ ವರ್ಷ, ಅರಣ್ಯ ಇಲಾಖೆ, ಪಶುವೈದ್ಯರು ಮತ್ತು ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳು ಆನೆ ಶಿಬಿರಗಳಿಗೆ ಹೋಗಿ ಕೋವಿಡ್ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ಪಶುವೈದ್ಯರ ನೇತೃತ್ವದ ತಂಡವು ಮೈಸೂರು ಮತ್ತು ಕೊಡಗು ಆನೆ ಶಿಬಿರಗಳಿಗೆ ಹೋಗಿ, ಈ ಐದು ಆನೆಗಳ ಆರೋಗ್ಯವನ್ನು ಪರಿಶೀಲಿಸುತ್ತದೆ.

ಒಮ್ಮೆ ಅವುಗಳ ವೈದ್ಯಕೀಯ ವರದಿ ಸಾಮಾನ್ಯವಾಗಿದ್ದರೆ ಮತ್ತು ಅವುಗಳ ಕೋವಿಡ್ ಪರೀಕ್ಷಾ ವರದಿ ನೆಗಟಿವ್ ಬಂದ ನಂತರ ದಸರಾ ಆಚರಣೆಯಲ್ಲಿ ಭಾಗವಹಿಸುವ ಆನೆಗಳ ಅಂತಿಮ ಪಟ್ಟಿಯನ್ನು ತಯಾರಿಸಲಾಗುತ್ತದೆ ಎಂದು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.