ಮೈಸೂರು ದಸರಾ, ನಾಳೆ ಗಜ ಪಯಣ ಆರಂಭ

– ಮಹದೇವಪ್ಪ.ಜಿ

ಹುಣಸೂರು, ಸೆ.30-ಸಾಂಸ್ಕøತಿಕ ನಗರಿಯಲ್ಲಿ ದಸರಾ ಮಹೋತ್ಸವ ಕಳೆಗಟ್ಟಲು ಕೆಲ ದಿನಗಳಷ್ಟೇ ಬಾಕಿ ಇದ್ದು ಕರೊನಾ ಆತಂಕದ ನಡುವೆಯೂ ನಾಡಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ನಾಡಹಬ್ಬ ಮೈಸೂರು ದಸರಾ ಗಜಪಯಣಕ್ಕೆ ನಾಳೆ ಅ. 1ರಂದು ಔಪಚಾರಿಕವಾಗಿ ಚಾಲನೆ ಪಡೆದು ಮೈಸೂರು ಪ್ರವೇಶಿಸಲಿದೆ.
ಈ ಬಾರಿ ದಸರಾ ಮಹೋತ್ಸವ ವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಗಜಪಯಣವನ್ನು ಔಪಚಾರಿಕವಾಗಿ ಹಮ್ಮಿಕೊಂಡಿವೆ ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಎಂ.ಜಿ.ಅಲೆಕ್ಸಾಂಡರ್ ತಿಳಿಸಿದರು.

ನಾಳೆ ಅಂದರೆ ಅ.1ರ ಗುರುವಾರ ಬೆಳಿಗ್ಗೆ ಇಲಾಖೆ ಅಕಾರಿಗಳ ನೇತೃತ್ವದಲ್ಲಿ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ 5 ಆನೆಗಳು ಮೈಸೂರಿಗೆ ಪ್ರಯಾಣ ಬೆಳೆಸಲಿವೆ.

ಈ ಕಾರ್ಯಕ್ರಮ ದಲ್ಲಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಮೇಳಗಳು ಇರುವುದಿಲ್ಲ. ಜನಪ್ರತಿ ನಿಗಳು, ಗಣ್ಯರು, ಸಾರ್ವಜನಿಕರು ಸೇರಿದಂತೆ ಯಾರನ್ನೂ ಆಹ್ವಾನಿಸಿಲ್ಲ. ಸ್ಥಳೀಯ ವನ್ಯಜೀವಿ ಮತ್ತು ಕಂದಾಯ ಇಲಾಖೆ ಅಕಾರಿಗಳಷ್ಟೇ ಇರಲಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಆನೆ ಈ ಬಾರಿ ಬದಲಾವಣೆ ಯಾಗಿದ್ದು , 8 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಅರ್ಜುನ ಬದಲಿಗೆ ಅಭಿಮನ್ಯು ಅಂಬಾರಿ ಹೊರಲಿದೆ ಎಂದು ಅರಣ್ಯ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.

60 ವರ್ಷ ದಾಟಿದ ಆನೆಗೆ ಹೆಚ್ಚು ಭಾರ ಹೊರಿಸದಂತೆ 8 ವರ್ಷಗಳ ಹಿಂದೆ ನ್ಯಾಯಾಲಯ ಆದೇಶ ಹೊರಡಿಸಿದೆ. ಆ ಪ್ರಕಾರ, 2012ರ ದಸರಾದಲ್ಲಿ ಬಲರಾಮನಿಂದ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಗೆ ವರ್ಗಾವಣೆಗೊಂಡಿತ್ತು. 60 ವರ್ಷ ಮೀರಿರುವ ಅರ್ಜುನನ ವಿಷಯದಲ್ಲೂ ಇದು ಪಾಲನೆಯಾಗಲಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಮತ್ತಿಗೋಡು ಆನೆ ಕ್ಯಾಂಪಿನಲ್ಲಿರುವ ಅಂಬಾರಿ ಹೊರುವ ಆನೆ ಅಭಿಮನ್ಯು (54), ಕುಶಾಲನಗರ ಆನೆಕಾಡು ಕ್ಯಾಂಪ್‍ನ ವಿಕ್ರಂ (40) ಮತ್ತು ವಿಜಯ (61), ದುಬಾರೆ ಆನೆ ಕ್ಯಾಂಪಿನಿಂದ ಗೋಪಿ (39) ಮತ್ತು ಕಾವೇರಿ (50) ಆನೆಗಳು ವೀರನಹೊಸಹಳ್ಳಿ ಗೇಟ್ ಬಳಿಯಿಂದ ಪ್ರಯಾಣ ಬೆಳೆಸಲಿವೆ.

ಅಂದು ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. 2ರಂದು ಅರಮನೆಯ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ.

ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಯಲಿರುವ ಜಂಬೂಸವಾರಿಯಲ್ಲಿ ಪ್ರಥಮ ಬಾರಿ ಚಿನ್ನದ ಅಂಬಾರಿ ಹೊರಲಿರುವ 5,400 ರಿಂದ 5,600 ಕೆ.ಜಿ. ತೂಕದ ಅಭಿಮನ್ಯು ಆನೆಯನ್ನು, 1970ರಲ್ಲಿ ಹೆಬ್ಬಳ್ಳ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ಇಲಾಖೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಈ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದ ದಸರೆಯಲ್ಲಿ ಅಂಬಾರಿ ಹೊತ್ತ ಅನುಭವಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿದೆ. ದಸರೆಯಲ್ಲಿ ಭಾಗವಹಿಸಲಿರುವ ಆನೆಗಳ ಯೋಗಕ್ಷೇಮದ ಜವಾಬ್ದಾರಿ ಮಾವುತ ಮತ್ತು ಕಾವಾಡಿಗಳ ಪಾಲು ಹೆಚ್ಚಿದ್ದು, ಅಭಿಮನ್ಯು ಮಾವುತ ವಸಂತ್ ಮತ್ತು ಕಾವಾಡಿ ರಾಜಣ್ಣ ವಹಿಸಿಕೊಳ್ಳಲಿದ್ದಾರೆ. ಅದೇ ಇತರೆ ಆನೆಗಳಿಗೂ ಪ್ರತ್ಯೇಕ ಮಾವುತ ಕಾವಾಡಿಗಳಿರುವರು.

Sri Raghav

Admin