ಮೈಸೂರು, ಆ.7- ನಾಡಹಬ್ಬ ಮೈಸೂರು ದಸರಾ2022ಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು. ಜಿಲ್ಲಾಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 9.01ರಿಂದ 9.35ರ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಚೈತ್ರಾ, ಗೋಪಾಲಸ್ವಾಮಿ, ಕಾವೇರಿ, ಲಕ್ಷ್ಮೀ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಿ ಪಯಣ ಆರಂಭಿಸಲಾಯಿತು. ಬೆಳ್ಳಂಬೆಳಗ್ಗೆ ವರುಣನ ಸಿಂಚನದ ನಡುವೆ ಕಲಾತಂಡಗಳು, ಮಂಗಳವಾದ್ಯಗಳ ಜತೆಗೆ ಗಜಪಡೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆಹಾಕಿದವು.
ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಇಂದು ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ನೇತೃತ್ವದಲ್ಲಿ ಆನೆಗಳನ್ನು ಮೈಸೂರಿಗೆ ಕರೆತರುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಇಂದು ಆರಂಭಗೊಂಡಿರುವ ಆನೆಗಳ ಪಯಣ ಆ.10ರಂದು ಅರಮನೆಗೆ ಬರುವ ಮೂಲಕ ಪೂರ್ಣಗೊಳ್ಳಲಿದೆ. ಅಂದು ಅರಮನೆಗೆ ಆಗಮಿಸುವ ಗಜ ಪರಿವಾರವನ್ನು ಬೆಳಗ್ಗೆ 9.20ರಿಂದ 10.00ರ ಕನ್ಯಾ ಲಗ್ನದಲ್ಲಿ ಬರಮಾಡಿಕೊಳ್ಳಲಾಗುತ್ತದೆ.
ಶಾಸಕರಾದ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್, ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ, ಎಸ್.ಪಿ.ಚೇತನ್ ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.