ಬೆಂಗಳೂರು, ಅ.6- ಬೆಲೆ ಏರಿಕೆ ನಡುವೆಯೂ ಈ ಬಾರಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ನಗರದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಆದರೆ, ಮಾರಾಟವಾಗಿ ಉಳಿದಿದ್ದ ತ್ಯಾಜ್ಯದ ರಾಶಿ ಎಲ್ಲೆಡೆ ರಾರಾಜಿಸುತ್ತಿದ್ದು, ವಿಲೇವಾರಿಯೇ ದೊಡ್ಡ ಸವಾಲಾಗಿದೆ.
ಮಾಮೂಲಿ ದಿನಗಳಿಗಿಂತ ಸುಮಾರು 500 ಟನ್ ತ್ಯಾಜ್ಯ ಉತ್ಪಾದನೆಯಾಗಿದ್ದು, ವಿಲೇವಾರಿಗೆ ಪೌರ ಕಾರ್ಮಿಕರು ಹೈರಾಣಾಗಿದ್ದಾರೆ.ಕೆಆರ್ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಮಾಗಡಿ ರಸ್ತೆ, ಬಸವನಗುಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ಬಿದ್ದಿದೆ.
ಹಬ್ಬಕ್ಕಾಗಿ ರಾಜ್ಯದ ವಿವಿಧ ಮೂಲೆಗಳಿಂದ ವ್ಯಾಪಾರಿಗಳು ಬಾಳೆಕಂದು, ಬೂದುಗುಂಬಳ, ಹೂವು ತಂದಿದ್ದು, ಮಾರಾಟವಾಗಿ ಉಳಿದಿದ್ದನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ 5 ಸಾವಿರ ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿತ್ತು.
ಆದರೆ, ಹಬ್ಬದ ಹಿನ್ನೆಲೆಯಲ್ಲಿ 500 ಟನ್ನಷ್ಟು ಹೆಚ್ಚು ತ್ಯಾಜ್ಯ ಸೃಷ್ಟಿಯಾಗಿದೆ. ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ತ್ಯಾಜ್ಯದ ರಾಶಿ ಕಂಡುಬರುತ್ತಿದ್ದು, ಪೌರ ಕಾರ್ಮಿಕರು ನಿರಂತರವಾಗಿ ವಿಲೇವಾರಿಯಲ್ಲಿ ತೊಡಗಿದ್ದಾರೆ.