ಮೀಸಲಾತಿ ವಿಷಯದಲ್ಲಿ ತಾಕತ್ತು ಪೌರುಷಗಳಿಗೆ ಸರ್ಕಾರ ಮಣಿಯಬಾರದು : ಡಿಸಿಎಂ

Spread the love

ಬೆಂಗಳೂರು, ಫೆ.18- ಮೀಸಲಾತಿ ಹೋರಾಟಗಳ ವಿಷಯದಲ್ಲಿ ಯಾರದೇ ತಾಕತ್ತು, ಪೌರುಷಗಳಿಗೆ ಮಣಿಯದೆ ಸರ್ಕಾರ ವೈಜ್ಞಾನಿಕವಾಗಿ ನ್ಯಾಯಯುತವಾದ ನಿರ್ಧಾರ ತೆಗೆದು ಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು. ನಗರದ ಕಲಾಕಾಲೇಜಿನಲ್ಲಿ ಬಹುಪಯೋಗಿ ವ್ಯಾಯಾಮ ಶಾಲೆ ಉದ್ಘಾಟನೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೀಸಲಾತಿ ಹೋರಾಟಗಳ ಕುರಿತಂತೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಲ್ಲ ಜಾತಿಗಳಲ್ಲೂ ನಮಗೆ ಅನ್ಯಾಯವಾಗಿದೆ. ಇನ್ನಷ್ಟು ಅವಕಾಶಗಳು ಸಿಗಬೇಕಿತ್ತು ಎಂಬ ಅಭಿಪ್ರಾಯಗಳಿವೆ. ಹಾಗಾಗಿ ಹೋರಾಟಗಳು ನಡೆಯುತ್ತಿವೆ. ಇಲ್ಲಿ ನಾನು ಕಮ್ಮಿ, ನಾನು ಹೆಚ್ಚು ಎಂಬ ಚರ್ಚೆಗಳು ಮುಖ್ಯವಲ್ಲ. ಸರ್ಕಾರ ನ್ಯಾಯಬದ್ದವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ಒತ್ತಡಗಳಿಗೆ ಮಣಿಯಬಾರದು ಎಂದು ಹೇಳಿದರು. ಪ್ರತಿಯೊಂದು ಜಾತಿಗಳಲ್ಲೂ ಅವರದೇ ಆದ ಲೆಕ್ಕಾಚಾರಗಳಿವೆ. ನಾವು ಹಿಂದುಳಿದಿದ್ದೇವೆ ಎಂಬ ಭಾವನೆಗಳಿವೆ.

ಹಾಗಾಗಿ ಮೀಸಲಾತಿ ಕೇಳುತ್ತಿದ್ದಾರೆ. ಮೀಸಲಾತಿ ಕೇಳುವುದು ಅಪರಾಧವಲ್ಲ. ಕೇಳದೆ ಇದ್ದರೆ ಯಾರಿಗೂ ಯಾವ ಸೌಲಭ್ಯಗಳು ಸಿಗುವುದಿಲ್ಲ. ಮೀಸಲಾತಿ ಬೇಡಿಕೆಯನ್ನು ಮುಂದಿಡುವುದು ಸಹಜ. ಆದರೆ ಸರ್ಕಾರ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ನ್ಯಾಯಬದ್ದ ತೀರ್ಮಾನ ಮಾಡುತ್ತದೆ ಎಂದರು.

ಶ್ರೀರಾಮ ಮಂದಿರ ದೇಣಿಗೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಅವರು ಅಪನಂಬಿಕೆ ಹುಟ್ಟುವಂತೆ ಮಾತನಾಡಿದ್ದಾರೆ. ಇದು ಸರಿಯಲ್ಲ. ಯಾವ ಪುಂಡಪೋಕರಿಗಳು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬೇಕು. ಅವರ ಕಣ್ಣಿಗೆ ಅಂತಹ ಯಾವುದಾದರೂ ಘಟನೆಗಳು ಕಂಡಿದ್ದರೆ ಪೊಲೀಸರಿಗೆ ದೂರು ನೀಡಲಿ. ಅದನ್ನು ಬಿಟ್ಟು ಸಮಾಜದ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡಬಾರದು.

ಅಪನಂಬಿಕೆ ಹುಟ್ಟಿಸಬಾರದು. ನಾವು ನಂಬಿಕೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಂದಕ್ಕೂ ಉತ್ತರದಾಯಿತ್ವವಿದೆ, ಪಾರದರ್ಶಕತೆಯಿದೆ, ಒಂದೊಂದು ರೂಪಾಯಿಗೂ ಲೆಕ್ಕಯಿದೆ. ಇವರಿಗೆ ಯಾವ ವಿಷಯದಲ್ಲಿ ಲೆಕ್ಕ ಸಿಕ್ಕಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬದಲು ಕುಮಾರಸ್ವಾಮಿಯವರು ಒಮ್ಮೆ ಕನ್ನಡಿ ಮುಂದೆ ನಿಂತು ಮಾತನಾಡಲಿ. ಅವರು ಮತ್ತು ಅವರ ಕುಟುಂಬ ಯಾವ ರೀತಿ ನಡೆದುಕೊಂಡು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಹಿನ್ನೆಲೆ ಏನು? ನಮ್ಮ ರಾಜಕಾರಣ ಏನೂ ಎಂಬುದೂ ಕೂಡ ಜನರಿಗೆ ಗೊತ್ತದೆ ಎಂದರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ. ಟಿಡಿಪಿ ಯೋಜನೆಯಲ್ಲಿ ಇದ್ದಂತಹ ಪ್ರಸ್ತಾವನೆಯ ಬಗ್ಗೆ ಚರ್ಚೆಗಳು ಆಗುತ್ತಿವೆ. ಪ್ರಜಾಪ್ರಭುತ್ವದಲ್ಲಿ ಚರ್ಚೆಗಳಿಗೆ ಅವಕಾಶವಿದೆ. ಚರ್ಚೆಯೇ ಆಗಬಾರದು ಎಂದರೆ ಹೇಗೆ? ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿ, ಸರ್ಕಾರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸಮಾಜಕ್ಕೆ ಪೂರಕವಾದದ್ದನ್ನು ತೆಗೆದುಕೊಳ್ಳಲಿದೆ ಎಂದರು.

Facebook Comments