ಡಿಕೆ ಬ್ರದರ್ಸ್ ವಿರುದ್ಧ ಡಿಸಿಎಂ ಅಶ್ವಥ್ ನಾರಾಯಣ ವಾಗ್ದಾಳಿ

Spread the love

ಬೆಂಗಳೂರು,ಅ.22- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಸರ್ವೀಸ್ ಪ್ರೊವೈಡರ್ ಮಿಸ್ಟರ್‍ಗಳೇ ಮೀರ್ ಸಾಧಕ್‍ಗಳು ಎಂದು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಿಂದ ಏನಾದರೂ ಬೇಕು ಎಂದರೆ ಕರೆ ಮಾಡುತ್ತಾರೆ. ಸರ್ವೀಸ್ ಪ್ರೊವೈಡರ್ ಕರೆದು ಸರ್ವೀಸ್ ಪಡೆಯುತ್ತಾರೆ. ಇಂಥವರೇ ನಿಜವಾದ ಮೀರ್ ಸಾಧಕ್‍ಗಳು ಎಂದು ವಾಗ್ದಾಳಿ ನಡೆಸಿದರು.

ಯಾವಾಗಲೂ ಸತ್ಯ ಕಹಿಯಾಗೇ ಇರುತ್ತದೆ. ಸತ್ಯವನ್ನು ಎದುರಿಸಲು ಶಕ್ತಿ ಬಳಸಿಕೊಳ್ಳಬೇಕು. ಸ್ವಾರ್ಥದಿಂದ ಕೂಡಿದ ಜನರಿಗೆ ಇದು ಕೀಳು ಎನ್ನುವ ಮನೋಭಾವ ಬಂದಿದೆ ಎಂದು ಟೀಕಾ ಪ್ರಹಾರ ನಡೆಸಿದರು.  ವ್ಯಕ್ತಿ ಆಧಾರಿತವಾಗಿ ಬಿಟ್ಟು ಒಂದು ಪಕ್ಷ ಸಿದ್ದಾಂತದ ಮೇಲೆ ರಾಜಕಾರಣ ಮಾಡಿದರೆ ಅರ್ಥವಿರುತ್ತದೆ. ಕೆಲವರು ನಾನು ಆಡಿದ್ದೇ ಆಟ ಎಂಬ ಮನೋಸ್ಥಿತಿಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಲೆಕ್ಕ ಕೇಳುವವರೇ ಇಲ್ಲ. ಎಲ್ಲದಕ್ಕೂ ಒಂದು ಇತಿಮಿತಿ ಇರಬೇಕೆಂದು ಕಿಡಿಕಾರಿದರು.

ಸರಿಯಾಗಿ ಉತ್ತರ ಹೇಳದೆ ಹೇಗೋ ಜಯಿಸಿಕೊಂಡು ಬಂದಿದ್ದಾರೆ. ಅವರು ಎಲ್ಲಿಂದ ಬಂದಿದ್ದರು? ಹೇಗಿದ್ದವರು ಹೇಗಾದರು? ಎಂಬುದಕ್ಕೆ ಲೆಕ್ಕ ಬೇಕು. ಇನ್ನು ಮುಂದೆ ಅವರ ಆಟ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಡಿಕೆಶಿ ಹಾಗೂ ಸುರೇಶ್ ಅವರ ಹೆಸರು ಹೇಳದೆ ಎಚ್ಚರಿಸಿದರು.  ತಾಯಿಗೆ ದ್ರೋಹ ಬಗೆಯುವುದು ಒಂದೇ ಪಕ್ಷಕ್ಕೆ ಮೋಸ ಮಾಡುವುದು ಒಂದೇ. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ. ನಂಬಿದ ಪಕ್ಷಕ್ಕೆ ಮೋಸ ಮಾಡಿದವರನ್ನು ಮೀರ್‍ಸಾಧಕರು ಎನ್ನದೆ ಇನ್ನೇನನ್ನಬೇಕು ಎಂದು ಪ್ರಶ್ನಿಸಿದರು.

ನಮ್ಮ ಬಳಿ ಆಡಿಯೋ ಇದೆ ಎಂದು ಕೆಲವರು ಫೋಸ್ ಕೊಟ್ಟರು. ಇಂಥದ್ದನ್ನೇ ಮಾಡಿ ಹೊಸ ಕತೆ ಕಟ್ಟಲು ಹೊರಟ್ಟಿದ್ದರು. ಅವರವರೇ ಎತ್ತಿಕಟ್ಟಿ ಅವರೇ ಚಿವುಟಿ ಕಳುಹಿಸಿದ್ದಾರೆ. ಅದರ ಬಗ್ಗೆ ನಾನು ಪ್ರಸ್ತಾಪಿಸಿದ್ದೆ.  ಹೊಸ ಕಥೆ ಕಟ್ಟಿ ಚುನಾವಣೆ ಗೆಲ್ಲಲು ಹೊರಟಿದ್ದರು. ಅದರಲ್ಲಿ ನಾವು ಮೊದಲೇ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ. ಕಥೆಗೂ ಮುಂಚೆಯೇ ಕ್ಲೈಮಾಕ್ಸ್ ನಡೆಸಲಾಗಿದೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಹತಾಶರಾಗಿ ಪೊಲೀಸರಿಗೆ ವಾರ್ನ್ ಮಾಡುತ್ತಿದ್ದಾರೆ. ಮೈಯಲ್ಲ ಪರಚಿಕೊಳ್ಳುತ್ತಿದ್ದಾರೆ.

ಚುನಾವಣೆ ಚುನಾವಣೆ ರೀತಿ ನಡೆಯಬೇಕು. ಜನರ ವಿಶ್ವಾಸ ಗಳಿಸಬೇಕೆ ಹೊರತು ದಬ್ಬಾಳಿಕೆ ಮಾಡಬಾರದು. ಬಾಯಿಗೆ ಬಂದಂತೆ ಮಾತನಾಡುವುದು, ಇಷ್ಟಬಂದಂತೆ ಮಾತನಾಡುವುದು ಅವರ ಸಂಸ್ಕøತಿ. ಮತದಾರರು ಇದನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಕಿಡಿಕಾರಿದರು.

ಬೆಂಗಳೂರಿನ ಇತಿಹಾಸದಲ್ಲಿ ಎದ್ದು ನಿಂತವರನ್ನು ಮತದಾರರು ಪ್ಯಾಕ್ ಮಾಡಿ ಎಲ್ಲೆಲ್ಲಿಗೋ ಕಳುಹಿಸಿದ್ದಾರೆ. ಅವರೆಲ್ಲ ಎಲ್ಲೆಲ್ಲೋ ಹೋಗಿದ್ದಾರೆ. ಇವರೆಲ್ಲ ಯಾವ ಲೆಕ್ಕ. ಕನಕಪುರದಲ್ಲೂ ಆಟ ನಡೆಯಲ್ಲ. ಬಂಡೆಯನ್ನೇ ಜನ ಒಡೆದು ಹಾಕಿದ್ದಾರೆ ಎಂದು ಅವರು ಟೀಕಿಸಿದರು.

Facebook Comments