ಬೆಂಗಳೂರು, ಜೂ.3- ಗೃಹಲಕ್ಷ್ಮಿ ಸೇರಿದಂತೆ ಪಂಚಖಾತ್ರಿ ಯೋಜನೆಗಳನ್ನು ಮನೆಮನೆ ಬಾಗಿಲಿಗೆ ತಲುಪಿಸಲು ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯ ತೊಡಗಿಸಿಕೊಳ್ಳಬೇಕೆಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಹಾರೋಹಳ್ಳಿಯಲ್ಲಿಂದು ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ದೇಶ ಮತ್ತು ರಾಜ್ಯದ ಇತಿಹಾಸದಲ್ಲೇ ಬೃಹತ್ ಪ್ರಮಾಣದ ಯೋಜನೆಗಳನ್ನು ಜಾರಿಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಐತಿಹಾಸಿಕವಾದ ಈ ಕೊಡುಗೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಪ್ರತೀ ಮನೆಗೂ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಿ ಮಾಹಿತಿ ಕಲೆ ಹಾಕಬೇಕು.
ಮನೆಯ ಯಜಮಾನಿ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಇತರ ವಿವರಗಳೊಂದಿಗೆ ನೊಂದಣಿ ಮಾಡಿಸಬೇಕು. ಆಫ್ ಲೈನ್, ಆನ್ ಲೈನ್ ಎರಡೂ ಮಾದರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಜುಲೈ 15ರ ಬಳಿಕ ಅರ್ಜಿ ನಮೂನೆಗಳನ್ನು ಕಳುಹಿಸುತ್ತೇನೆ. ಕಾರ್ಯಕರ್ತರು ಮನೆಗಳಿಗೆ ತೆರಳಿ ಪ್ರತಿಯೊಬ್ಬರಿಗೂ ಸೌಲಭ್ಯ ತಲುಪಿಸುವ ಪ್ರಯತ್ನ ಮಾಡಿ ಎಂದು ಕರೆ ನೀಡಿದರು.
ಗ್ಯಾರಂಟಿ ಲಾಭ ಪಡೆಯಲು ದಾಖಲಾತಿಗಳ ಸಿದ್ಧತೆಯಲ್ಲಿ ತೊಡಗಿದ ಜನ
ಕ್ಷೇತ್ರದ ಜನರು ತಮ್ಮ ಊರಿನ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಮಾತ್ರ ತಮ್ಮ ಬಳಿಗೆ ಬರಬೇಕು. ಅಧಿಕಾರಿಗಳ ವರ್ಗಾವಣೆ, ಗುತ್ತಿಗೆದಾರರು ಹಾಗೂ ಮಧ್ಯವರ್ತಿಗಳು ಜನರ ತಲೆ ಕೆಡಿಸಿ ತಮ್ಮ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದರು.
ಪಂಚಖಾತ್ರಿ ಯೋಜನೆಗಳ ಜಾರಿಯ ಬಳಿಕ ವಿರೋಧಪಕ್ಷಗಳಲ್ಲಿ ದುಃಖ-ದುಮ್ಮಾನ ನೋಡಲಾಗುತ್ತಿಲ್ಲ. ಸೋಲಿನಿಂದ ಕಂಗೆಟ್ಟಿರುವ ಅವರಿಗೆ ತಾಳ್ಮೆಯಿಲ್ಲ. ಜನ ನಮಗೆ ಅವಕಾಶ ನೀಡಿದ್ದಾರೆ. ಅವರ ಇಚ್ಛೆಯಂತೆ ಕೆಲಸ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ತಮಗೆ ದ್ವೇಷ ರಾಜಕಾರಣದ ಅಗತ್ಯವಿಲ್ಲ. ಯಾರನ್ನೂ ಟೀಕಿಸುವ ಗೋಜಿಗೂ ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಲೋಕಸಭೆ ಚುನಾವಣೆಗಳು ಎದುರಾಗಲಿವೆ. ವಿಧಾನಸಭೆ ಚುನಾವಣೆಯಲ್ಲಿ ಎಲ್ಲೆಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ಗಮನಿಸಿ ಪಕ್ಷ ಬಲಪಡಿಸಲು ಕಾರ್ಯಕರ್ತರು ಮುಂದಾಗಬೇಕು.
ಬಾಡಿಗೆ ಮನೆಯಲ್ಲಿರುವವರಿಗೂ ಗೃಹಜ್ಯೋತಿ ಭಾಗ್ಯ : ಡಿಸಿಎಂ ಡಿಕೆಶಿ
ನಮಗೆ ದೊಡ್ಡ ದೊಡ್ಡ ನಾಯಕರುಗಳ ಅಗತ್ಯವಿಲ್ಲ. ಪಂಚಾಯಿತಿ ಮಟ್ಟದ ಪ್ರಮುಖರೇ ಸಾಕು ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಸೇಬಿನ ಹಾರ ಹಾಕಿ ಕ್ಷೇತ್ರದ ಜನ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಹಾರದಿಂದ ಒಂದು ಹಣ್ಣನ್ನು ಕಿತ್ತುಕೊಂಡ ಡಿ.ಕೆ.ಶಿವಕುಮಾರ್ ಅದನ್ನು ಎರಡು ಬಾರಿ ಕಚ್ಚಿ ತಿಂದು ಉಳಿದಿದ್ದನ್ನು ಜನರತ್ತ ಎಸೆದಿರುವುದು ಆಕ್ಷೇಪಕ್ಕೆ ಗುರಿಯಾಗಿದೆ.
DCM, #dkshivakumar, #workers, #congressguarantee,