ಮಹದಾಯಿ ವಿಚಾರದಲ್ಲಿ ಆತುರ ಬೇಡ : ಡಿಸಿಎಂ ಕಾರಜೋಳ

ಬೆಂಗಳೂರು, ಜ.5-ಮಹದಾಯಿ ವಿಚಾರದಲ್ಲಿ ಹೋರಾಟದ ಆತುರ ಬೇಡ. ವಿವಾದ ನ್ಯಾಯಾಲಯದಲ್ಲಿದೆ. ರಾಜ್ಯಕ್ಕೆ ಯಾವುದೇ ರೀತಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಹಲವು ನಿರ್ಣಯಗಳಾಗಿವೆ, ಕಾನೂನು ಹೋರಾಟಗಳಾಗಿವೆ. ಕೇಂದ್ರ ಸಚಿವರು ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಾವು ಆತುರ ಮಾಡದಂತೆ ಕಾಯೋಣ ಎಂದು ಹೇಳಿದರು.

ಮಹದಾಯಿಗಾಗಿ ಆಗ್ರಹಿಸಿ ಹೊರಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಇಂದು ಸಭೆ ಕರೆಯಲಾಗಿದೆ. ಅದು ರಾಜಕೀಯ ಗಿಮಿಕ್ಕಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಹೋರಾಟವನ್ನು ತಪ್ಪು ಎಂದು ಹೇಳುವುದಿಲ್ಲ. ರಾಜಕೀಯ ಗಿಮಿಕ್ ಎಂದು ಕರೆಯಲಾರೆ.

ಕುಡಿಯುವ ನೀರಿಗಾಗಿ ಹೋರಾಟ ಮಾಡುವುದು ಅವರ ಹಕ್ಕು. ಹೋರಾಟಗಾರರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಮಸ್ಯೆ ಬಗೆಹರಿಯಬೇಕಾಗಿದೆ. ಆತುರ ಮಾಡುವುದು ಬೇಡ. ನ್ಯಾಯ ಪಡೆಯೋಣ ಎಂದು ಹೇಳಿದರು.