ಮುಷ್ಕರ ನಡೆಸಿದರೆ ನಿಮಗೆ ಸಂಬಳವೂ ಸಿಗಲ್ಲ : ಡಿಸಿಎಂ ಸವದಿ ಎಚ್ಚರಿಕೆ

ಬೆಂಗಳೂರು,ಏ.7-ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮುಷ್ಕರ ನಡೆಸಿದರೆ ಮುಂದೆ ಸಿಬ್ಬಂದಿಗೆ ತಿಂಗಳ ಸಂಬಳ ನೀಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಎಚ್ಚರಿಸಿದ್ದಾರೆ. ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಮೊದಲೇ ನಷ್ಟದಲ್ಲಿದೆ. ಪ್ರತಿದಿನ ನಾಲ್ಕು ಕೋಟಿ ನಷ್ಟ ಅನುಭವಿಸುತ್ತಿದೆ. ನೀವು ಮುಷ್ಕರ ನಡೆಸುವುದರಿಂದ ನಷ್ಟ ನಿಮಗೆ ಹೊರತು ಬೇರೆ ಇನ್ಯಾರಿಗೂ ಅಲ್ಲ ಎಂದರು.

ಈಗಲೂ ಕೂಡ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡುತ್ತೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಪ್ರಯಾಣಿಕರಿಗೆ ತೊಂದರೆ ಕೊಟ್ಟು ಮುಷ್ಕರ ನಡೆಸುವುದು ನ್ಯಾಯಯುತವೇ ಎಂದು ಅವರು ಪ್ರಶ್ನಿಸಿದರು. ಇಲಾಖೆ ನಷ್ಟದಲ್ಲಿದ್ದಾಗಲೂ ನಾವು ಸಿಬ್ಬಂದಿಗೆ ಹಾಗೂ ಅವರು ನಂಬಿಕೊಂಡಿರುವ ಕುಟುಂಬಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ತಿಂಗಳ ವೇತನವನ್ನು ಸರ್ಕಾರದಿಂದ ಕಾಲಮಿತಿಯೊಳಗೆ ನೀಡಿದ್ದೇವೆ. ಜೂನ್ ತಿಂಗಳವರೆಗೂ ವೇತನವನ್ನು ತಡೆ ಹಿಡಿಯದಂತೆ ಸರ್ಕಾರ ಆದೇಶಿಸಿದೆ.

ಸಾರಿಗೆ ನೌಕರರು ಮುಂದಿಟ್ಟಿರುವ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. 9ನೇ ಬೇಡಿಕೆಯನ್ನು ಪರಿಗಣಿಸಲು ಆರ್ಥಿಕ ಸಮಸ್ಯೆ ಇದೆ. ಇದನ್ನು ಸಿಬ್ಬಂದಿಗಳು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಹೆಚ್ಚು ಸಂಬಳ ಕೊಡಲು ನಾವು ಸಿದ್ದವಿದ್ದೇವೆ. ಶೇ.8ರಷ್ಟು ವೇತನ ಹೆಚ್ಚಳ ಮಾಡಲು ಅನುಮತಿ ನೀಡಬೇಕೆಂದು ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಆಯೋಗದ ಅನುಮತಿ ಇಲ್ಲದೆ ನಾವು ಯಾವುದೇ ಕ್ರಮವನ್ನು ತೆಗೆದುಕೊಳ್ಳುವಂತಿಲ್ಲ. ಯಾರದೋ ಮಾತು ಕೇಳಿ ಪ್ರತಿಭಟನೆ ನಡೆಸಬೇಡಿ ಎಂದು ಸಲಹೆ ಮಾಡಿದರು.

ತಕ್ಷಣವೇ ಎಲ್ಲಾ ಸಿಬ್ಬಂದಿಯವರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಸದ್ಯಕ್ಕೆ ಬಿಎಂಟಿಸಿ ಮತ್ತು ಕೆಎಸ್‍ಆರ್‍ಟಿಸಿಯಲ್ಲಿ 30 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಅದು ನಿಂತು ಹೋದರೆ ಇನ್ನಷ್ಟು ಹೊರೆಯಾಗಲಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸವದಿ ಮನವಿ ಮಾಡಿದರು.

ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಏನೇ ಸಮಸ್ಯೆಗಳಿದ್ದರೂ ಪರಸ್ಪರ ಒಟ್ಟಾಗಿ ಕೂತು ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳೋಣ. ಮುಷ್ಕರ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಸರ್ಕಾರದ ಮೇಲೆ ನಂಬಿಕೆಯಿಟ್ಟು ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದರು.